ಆರೋಗ್ಯಯುತ ಜೀವನಕ್ಕೆ ಸ್ವಚ್ಛತೆ ಅತ್ಯಗತ್ಯ ಮಸ್ಕಿ ತಾಪಂ ಇಒ ಅಮರೇಶ್
ಮಸ್ಕಿ : ರಾಷ್ಟ್ರಪಿತ ಮಹಾತ್ಮ ಗಾಂಧೀ, ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಜಿ ಜಯಂತಿ ನಿಮಿತ್ತ ತಾಲೂಕಿನ ವಿವಿಧೆಡೆ ಬುಧವಾರ ಸ್ವಚ್ಛತಾ ಹೀ ಸೇವಾ ಅಭಿಯಾನ ಜರುಗಿತು.
ಸಂತೆಕಲ್ಲೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಮಸ್ಕಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಅಮರೇಶ್ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆಯ ಮಹತ್ವವನ್ನು ತಿಳಿಸುವ ನಿಟ್ಟಿನಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬರು ಮನೆಯ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಮನೆ ಸುತ್ತಲಿನ ಪರಿಸರದಲ್ಲಿ ಸ್ವಚ್ಛತೆಗೆ ಗಮನಹರಿಸಬೇಕು. ಇದರಿಂದ ಅನೇಕ ಸಾಂಕ್ರಾಮಿಕ ರೋಗಗಳನ್ನು ತಡೆಯಬಹುದಾಗಿದೆ. ಗ್ರಾಮ ಪಂಚಾಯತಿಯಿಂದ ಬರುವ ಘನತ್ಯಾಜ್ಯ ವಿಲೇವಾರಿ ಗಾಡಿಗೆ ಕಸ ನೀಡಿ ಸರ್ಕಾರದ ಯೋಜನೆಯ ಯಶಸ್ಸಿಗೆ ಸಹಕರಿಸಬೇಕು. ಬಯಲು ಬಹಿರ್ದೆಸೆಯಿಂದ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ. ಹಳ್ಳಿಗಳಲ್ಲಿ ಶೌಚಗೃಹ ನಿರ್ಮಾಣಕ್ಕೆ ಸರ್ಕಾರ ಸಹಾಯಧನ ಒದಗಿಸುತ್ತಿದ್ದು, ಸದ್ಭಳಕೆ ಮಾಡಿಕೊಳ್ಳಬೇಕು. ಕೇವಲ ಶೌಚಾಲಯ ನಿರ್ಮಿಸಿಕೊಂಡು, ಅನುದಾನ ಪಡೆದರೆ ಪ್ರಯೋಜನವಿಲ್ಲ. ಪ್ರತಿನಿತ್ಯ ಬಳಕೆಗೆ ಆದ್ಯತೆ ನೀಡಬೇಕು ಎಂದರು.
ತದ ನಂತರ ಗ್ರಾಪಂ ಗ್ರಂಥಾಲಯಕ್ಕೆ ಭೇಟಿ ನೀಡಿ ದಿನ ನಿತ್ಯ ಬರುವ ದಿನ ಪತ್ರಿಕೆಗಳು, ಲಭ್ಯ ಇರುವ ಪುಸ್ತಕಗಳ ಕುರಿತು ಮಾಹಿತಿ ಪಡೆದರು. ತದ ನಂತರ ನರೇಗಾದಡಿ ನಿರ್ಮಿಸಿದ ಸಿಸಿ ರಸ್ತೆ, ಹಳ್ಳಕ್ಕೆ ನಿರ್ಮಿಸಿದ ವೆಂಟೆಡ್ ಚೆಕ್ ಡ್ಯಾಮ್ ಪರಿಶೀಲಿಸಿದರು.
ತದ ನಂತರ ಅಂಕುಶದೊಡ್ಡಿ ಗ್ರಾಮ ಪಂಚಾಯತಿಗೆ ಭೇಟಿ ನೀಡಿ, ವಿವಿಧ ಕಾಮಗಾರಿ, ಕಡತಗಳನ್ನು ಪರಿಶೀಲಿಸಿದರು.
ಈ ವೇಳೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ನಾಗರಾಜ್, ಶಾಂತಪ್ಪ, ತಾಂತ್ರಿಕ ಸಹಾಯಕ ಅಭಿಯಂತರರಾದ ಸೋಮಶೇಖರ್, ಗ್ರಾಪಂ ಸಿಬ್ಬಂದಿ ಅಯ್ಯನಗೌಡ, ಬುಡನ್ ಸಾಬ್, ಶಾಲಾ ಶಿಕ್ಷಕರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಇತರರು ಇದ್ದರು.
ಪಾಮನಕಲ್ಲೂರು: ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಛತಾ ಹೀ ಸೇವಾ ಅಭಿಯಾನ ನಿಮಿತ್ತ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಗ್ರಾಮ ಪಂಚಾಯತಿ ಆವರಣದಲ್ಲಿ 2025-26 ನೇ ಸಾಲಿನ ಮಹಾತ್ಮ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕ್ರಿಯಾ ಯೋಜನೆ ತಯಾರಿಸಲು ಸಹಾಯಕ ನಿರ್ದೇಶಕರಾದ (ಗ್ರಾಮೀಣ ಉದ್ಯೋಗ) ಶಿವಾನಂದರಡ್ಡಿ ಅವರ ನೇತೃತ್ವದಲ್ಲಿ ಗ್ರಾಮಸಭೆ ಜರುಗಿತು. ತದ ನಂತರ ನರೇಗಾದಡಿ ಕೈಗೊಂಡಿರುವ ಶೌಚಾಲಯ ಕಾಮಗಾರಿಯನ್ನು ಪರಿಶೀಲಿಸಿದರು.
ಈ ವೇಳೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಕೃಷ್ಣ ಹುನಗುಂದ, ಗ್ರಾಪಂ ಸದಸ್ಯರು, ಶಾಲಾ ಶಿಕ್ಷಕರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಗ್ರಾಪಂ ಸಿಬ್ಬಂದಿ ಇದ್ದರು.
ಮೆದಕಿನಾಳ : ನಾಗರಬೆಂಚಿ ಗ್ರಾಮದ ಶಾಲೆ ಆವರಣದಲ್ಲಿ ಸ್ವಚ್ಛತಾ ಹೀ ಸೇವಾ ಅಭಿಯಾನದಡಿ ಸ್ವಚ್ಛತೆ ಕೈಗೊಳ್ಳಲಾಯಿತು. ಸಹಾಯಕ ನಿರ್ದೇಶಕರಾದ (ಪಂಚಾಯತ್ ರಾಜ್) ಸೋಮನಗೌಡ ಅವರ ನೇತೃತ್ವದಲ್ಲಿ 2025-26 ನೇ ಸಾಲಿನ ನರೇಗಾ ಯೋಜನೆಯ ಕ್ರಿಯಾ ಯೋಜನೆ ತಯಾರಿಸಲು ಗ್ರಾಮ ಸಭೆ ಜರುಗಿತು.
ಈ ವೇಳೆ ಗ್ರಾಪಂ ಅಧ್ಯಕ್ಷರಾದ ಲಿಂಗಣ್ಣ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ತಿಮ್ಮಣ್ಣ, ಗ್ರಾಪಂ ಸದಸ್ಯರು, ಮುಖಂಡರು, ಗ್ರಾಪಂ ಸಿಬ್ಬಂದಿ ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ