*ಅವಮಾನವೋ? ಅತಿರೇಖವೋ ..?

 *ಭಾವದಂಗಳ - 60*

ನಾವೆಲ್ಲರೂ ಜೀವನದಲ್ಲಿ ಒಂದಲ್ಲ ಒಂದು ಬಾರಿ ಅವಮಾನ, ಟೀಕೆ, ಅಪಹಾಸ್ಯ, ನಿಂದನೆಗಳನ್ನು ಎದುರಿಸಿಯೇ ಇರುತ್ತೇವೆ. ಕೆಲವೊಂದನ್ನು ಮರೆತುಬಿಡುತ್ತೇವೆ ಆದರೆ ಇನ್ನು ಕೆಲವು ಮನಸ್ಸಿನಾಳದಲ್ಲಿ ಉಳಿದು ಹೃದಯವನ್ನು ಇಂಚಿಂಚಾಗಿ ಕೊಲ್ಲುತ್ತಿರುತ್ತದೆ. ನಮಗೆ ಅವಮಾನ ಮಾಡಿದವರು ಅದನ್ನು ಮರೆತರೂ ನಾವು ಮಾತ್ರ ಅದರ ಭಾರವನ್ನು ಹೊತ್ತುಕೊಂಡು ಒದ್ದಾಡುತ್ತೇವೆ. ಅವಮಾನಕ್ಕೆ ಸರಿಯಾದ ಉತ್ತರ ನೀಡಬೇಕು, ಸರಿಯಾದ ಪಾಠ ಕಲಿಸಬೇಕು ಎನ್ನುವ ಹಠಕ್ಕೆ ಬಿದ್ದು ಮನಸ್ಸಿನ ತುಂಬಾ ವಿಷವನ್ನು ತುಂಬಿಕೊಳ್ಳುತ್ತೇವೆ. ಈ ನಿಧಾನ ವಿಷವೇ ಮುಂದೊಂದು ದಿನ ನಮ್ಮ ಸರ್ವನಾಶಕ್ಕೆ ಕಾರಣವಾಗಬಹುದು ಎಂಬ ಕನಿಷ್ಠ ಪ್ರಜ್ಞೆಯೂ ಆ ಸಮಯದಲ್ಲಿ ಮೂಡುವುದಿಲ್ಲ. 


*ಕಾಲಕ್ಕೆ ತಕ್ಕ ಬದಲಾಗುವ ಮನಸ್ಥಿತಿ*

ಒಂದಂತೂ ಸತ್ಯ ನಮ್ಮ ಮನಸ್ಥಿತಿಗಳು ಕಾಲ ಗತಿಸಿದಂತೆ ಬದಲಾಗುತ್ತಾ ಹೋಗುವುದು. ದಶಕಗಳ ಹಿಂದೆ ಆಡಿದ ಮಾತಿನಲ್ಲಿ ಪಕ್ವತೆ ಇಲ್ಲದೆ ಇರಬಹುದು. ಅಂದಿನ ಮನಸ್ಥಿತಿಗೆ ತಕ್ಕಂತೆ ಇರುವ ನಮ್ಮ ಮಾತು, ವರ್ತನೆ, ನಡತೆ ಬಹಳ ಬಾಲಿಶವಾಗಿರಬಹುದು. ವಯಸ್ಸು ಬಲಿತಂತೆ ಮನಸ್ಸು ಬಲಿಯುವುದು.ನಮ್ಮ ಹಿಂದಿನ ನಡೆ, ನುಡಿ,ವರ್ತನೆಗೆ ನಾವೇ ನಾಚಿ ನಕ್ಕು ಬಿಡಬಹುದು. ಅಪಕ್ವ ಮನಸ್ಥಿತಿ ಕಾಲ ಕಳೆದಂತೆ ಪಕ್ವಗೊಳ್ಳುವುದು. ಬಾಲ್ಯದಲ್ಲಿ ತನ್ನ ಸ್ನೇಹಿತರನ್ನು ನಿಂದಿಸಿರುವುದು, ತನ್ನ ಮನೆಯಲ್ಲಿರುವ ಐಷಾರಾಮಿ ವಸ್ತುಗಳ ಬಗ್ಗೆ ಗರ್ವ ಪಟ್ಟಿರುವುದು, ತಾನು ಪಡೆದುಕೊಂಡ ಅಂಕಗಳ ಬಗ್ಗೆ ಹೆಮ್ಮೆಪಡುತ್ತಾ ತನ್ನದೇ ಸಹಪಾಠಿ ತೆಗೆದುಕೊಂಡ ಅಂಕಗಳ ಬಗ್ಗೆ ಅವಹೇಳನ ಮಾಡುವುದು, ಇತ್ಯಾದಿಗಳೆಲ್ಲವೂ ನಾವು ನೀವೆಲ್ಲರೂ ಎದುರಿಸಿರುವ ಅನುಭವಗಳು.ಇದನ್ನೇ ಅವಮಾನ ಎಂದುಕೊಂಡು ಮನಸ್ಸಿನಲ್ಲಿ ವಿಷದ ಬೀಜವ ಬಿತ್ತಿ ಮೊಳೆಯಲು ಬಿಟ್ಟರೆ ಮುಂದೊಂದು ದಿನ ಬೆಳೆದು ಹೆಮ್ಮರವಾಗುವುದರಲ್ಲಿ ಸಂಶಯವಿಲ್ಲ. ಇಂತಹ ವರ್ತನೆಗಳು ಅಪಕ್ವ ಮನಸ್ಥಿತಿಯ ಅಭಿವ್ಯಕ್ತಿಯೇ ಹೊರತು ಇದರಲ್ಲಿ ಯಾವುದೇ ದುರುದ್ದೇಶವಿಲ್ಲ ಎಂದುಕೊಂಡರೆ ಅದು ಯಾರ ಮನಸ್ಸನ್ನೂ ನೋಯಿಸುವುದಿಲ್ಲ.

*ಪ್ರತೀಕಾರದ ಬೆಂಕಿಗೆ ಆಹುತಿ ಯಾರು?*

ಅದ್ಯಾವುದೋ ಕಾಲದಲ್ಲಿ ನಮಗ್ಯಾರೋ ಅವಮಾನ ಮಾಡಿದರು, ತನ್ನನ್ನು ಅತ್ಯಂತ ಹೀನವಾಗಿ ನಡೆಸಿಕೊಂಡರು, ಕೀಳುಮಟ್ಟದಲ್ಲಿ ವರ್ತಿಸಿದರು ಎಂದು ಕೊರಗುತ್ತಾ ಹಲವಾರು ವರ್ಷಗಳ ಬಳಿಕ ಅದೇ ನೋವಿಗೆ ಪ್ರತಿಕಾರ ತೀರಿಸಿಕೊಳ್ಳಬೇಕೆನ್ನುವ ಮನಸ್ಥಿತಿಯನ್ನು ಕಾಣುತ್ತೇವೆ. ನಮ್ಮ ಪಾಡಿಗೆ ನಾವೇನೋ ನೆಮ್ಮದಿಯಿಂದ ಇರುವಾಗ ಬರ ಸಿಡಿಲಿನಂತೆ ಒಂದು ದಿನ ಅದೆಷ್ಟೋ ವರ್ಷಗಳ ಹಿಂದೆ ನಾವಾಡಿದ ಮಾತುಗಳಿಂದ ನೊಂದು ಅವಮಾನದ ಬೆಂಕಿಯಿಂದ ಬೆಂದವರು ನೆನಪಿಸಿ ಕರೆ ಮಾಡಬಹುದು. ಅದರ ನೆನಪೇ ಇಲ್ಲದ ನಾವು ಯೋಚಿಸಿ ಯೋಚಿಸಿ ಚಿಂತೆಗೀಡಾಗಬಹುದು. ಕಾಲ ಬದಲಾಗಿದೆ, ಪರಿಸ್ಥಿತಿಗಳು ಬದಲಾಗಿದೆ, ಆದರೆ ಹಳೆಯ ವಿಚಾರಗಳನ್ನು ಮತ್ತೆ ಮತ್ತೆ ಕೆದಕುವ ಮನಸ್ಥಿತಿಯವರನ್ನು ಬದಲಾಯಿಸುವುದು ಕಷ್ಟ. ಹೆಚ್ಚೆಂದರೆ ಈ ಬಗ್ಗೆ ಕ್ಷಮೆ ಕೋರಬಹುದು. ಆದರೆ ಅದಕ್ಕೂ ಒಪ್ಪದೇ ಉದ್ದೇಶಪೂರ್ವಕವಾಗಿ ಪ್ರತಿಕಾರದ ಭಾವ ತಾಳಿದರೆ ಇದನ್ನು ನಿರ್ಲಕ್ಷಿಸುವುದೇ ಒಳಿತು.

*ಬದುಕು ಕಲಿಸಿದ ಪಾಠ*

 ಒಮ್ಮೆ ಬಡ ಬಾಲಕನೊಬ್ಬ ಹಳೆಯ ಹರಿದ ಬಟ್ಟೆ ಧರಿಸಿ ಶಾಲೆಗೆ ಹೋಗುತ್ತಿದ್ದ.ಅವನ ಕೆಲವು ಸ್ನೇಹಿತರು ಇದನ್ನು ಕಂಡು ಯಾವಾಗಲೂ ಅಪಹಾಸ್ಯ ಮಾಡುತ್ತಿದ್ದರು. “ ನೀನು ಬಡವ,ನಿನ್ನ ಬಳಿ ಏನೂ ಇಲ್ಲ,ಯಾರದ್ದೋ ಬಟ್ಟೆ ಧರಿಸಿ ಶಾಲೆಗೆ ಬರುತ್ತೀಯ” ಎಂದೆಲ್ಲಾ ಗೇಲಿ ಮಾಡುತ್ತಿದ್ದರು. ಕಾಲ ಬದಲಾಯಿತು ಆ ಬಾಲಕ ಬೆಳೆದು ಶ್ರಮಪಟ್ಟು ಬದುಕಿನಲ್ಲಿ ನೆಲೆ ನಿಂತು ಶ್ರೀಮಂತನಾದ. ಸುಂದರವಾದ ಮನೆ ಕಟ್ಟಿದ. ಆರ್ಥಿಕವಾಗಿ ಭದ್ರನಾದ. ಆದರೆ ಆ ಬಾಲ್ಯದ ಅವಮಾನವನ್ನು ಮರೆಯಲಾಗಲಿಲ್ಲ. 20 ವರ್ಷಗಳ ಬಳಿಕ ಅದೇ ಸ್ನೇಹಿತರನ್ನು ಹುಡುಕಿಕೊಂಡು ಹೊರಟ.ಸ್ನೇಹಿತರೊಂದಿಗೆ ಒಂದು ಸ್ನೇಹಕೂಟ ಏರ್ಪಡಿಸಿದ.ತನ್ನ ಐಷಾರಾಮಿ ಜೀವನದ ಬಗ್ಗೆ ಮಾತಾಡಿದ.ಸ್ನೇಹಿತರೆಲ್ಲರೂ ಸಂತೋಷಪಟ್ಟರು.ಕೊನೆಗೆ ಎಲ್ಲರನ್ನೂ ಬೀಳ್ಕೊಟ್ಟು ಹೊರಡುವ ಸಂಧರ್ಭದಲ್ಲಿ “ ನನ್ನ ಶಾಲಾ ದಿನಗಳಲ್ಲಿ ನನ್ನ ಹರಿದ ಬಟ್ಟೆ ಕಂಡು ನೀವು ಎಷ್ಟೆಲ್ಲಾ ಅವಮಾನ ಮಾಡಿದ್ದೀರಿ ಎನ್ನುವುದು ನೆನಪಿದೆಯಾ ನಿಮಗೆ?ನೋಡಿ ಈಗ ನಾನು ಎಷ್ಟು ಶ್ರೀಮಂತನಾಗಿದ್ದೇನೆ.ಈಗ ನನ್ನ ಬಳಿ ಮನೆ,ಆಸ್ತಿ,ಅಂತಸ್ತು ,ಅಧಿಕಾರ ಎಲ್ಲವೂ ಇದೆ.ಆದರೆ ನಿಮ್ಮ ಪರಿಸ್ಥಿತಿ ಹೇಗಿದೆ?” ಎಂದನು.ಈ ಮಾತು ಕೇಳಿ ಎಲ್ಲಾ ಸ್ನೇಹಿತರೂ ಏನನ್ನೂ ಹೇಳಲಾಗದೆ ಮೂಕರಾದರು.ಅಸಲಿಗೆ ಇದ್ಯಾವುದೂ ಅವರಿಗೆ ನೆನಪೇ ಇರಲಿಲ್ಲ.ಆದರೆ ಇಲ್ಲಿ ಒಂದು ಪ್ರಶ್ನೆ ಕಾಡುವುದು.ಇದು ನಿಜವಾಗಿಯೂ ಸಾಧನೆಯ ಪ್ರತೀಕವೋ?ಅಥವಾ ಅತಿರೇಕದ ಭಾವನೆಯೋ?

*ಪ್ರತೀಕಾರ ಮನಸ್ಸಿನ ದೌರ್ಬಲ್ಯ*

ಒಂದಾನೊಂದು ಕಾಲದಲ್ಲಿ ಆದ ಅವಮಾನವನ್ನು ನೆನೆದು ಅದರ ಪ್ರತೀಕಾರ ತೀರಿಸಿಕೊಳ್ಳಬೇಕು ಎನ್ನುವ ಹಠಕ್ಕೆ ಬೀಳುವುದು ಮನಸ್ಸಿನ ದೌರ್ಬಲ್ಯ. ಒಂದು ಕಾಲದಲ್ಲಿ ಶೂನ್ಯದಲ್ಲಿ ಇದ್ದವನು ಇಂದು ಸ್ಥಾನಮಾನ, ಅಧಿಕಾರ ಗಳಿಸಿ ತನ್ನನ್ನು ನಿಂದಿಸಿದವರ ನೆನಪಿಸಿಕೊಂಡು ಪ್ರತಿನಿಂದನೆ ಮಾಡುತ್ತಾರೆಂದರೆ ಇದು ಅಹಂಕಾರ ಮತ್ತು ಅತಿರೇಕದ ವರ್ತನೆಯೇ ಸರಿ. ಅವಮಾನಗಳನ್ನು ಪ್ರೇರಣೆಯಾಗಿ ಸ್ವೀಕರಿಸಿದಾಗ ಜೀವನದ ಪಯಣ ಅರ್ಥಪೂರ್ಣ. ನಮ್ಮ ಬೆಳವಣಿಗೆಗೆ ಕಾರಣವಾದ ಹಳೆಯ ಗಾಯಗಳು ನಮ್ಮ ನಿಜವಾದ ಗೆಲುವಿಗೆ ಕಾರಣ. ಹಳೆಯ ನೋವಿಗೆ ಪ್ರತಿಕಾರ ತೀರಿಸುವುದಕ್ಕಿಂತ ನಿರ್ಲಿಪ್ತ ನಗು ತೋರುವುದೇ ಶ್ರೇಷ್ಠ ಪ್ರತಿಕ್ರಿಯೆ.ನಿಜವಾದ ಯಶಸ್ಸು ಸಿಗುವುದು ಕ್ಷಮಿಸುವುದರಿಂದಲೇ ಹೊರತು ದ್ವೇಷದಿಂದ ಅಲ್ಲ. ಹಳೆ ಅವಮಾನಗಳನ್ನು ಹೃದಯದಲ್ಲಿ ಹೊತ್ತರೆ ನಮ್ಮ ಮನಸ್ಸು ಇನ್ನಷ್ಟು ಚಿಕ್ಕದಾಗುವುದು. ಅದನ್ನೇ ಪ್ರೇರಣೆಯಾಗಿ ಪರಿವರ್ತಿಸಿ ಮುಂದೆ ಸಾಗಿದರೆ ಅದು ನಮಗೆ ನಿಜವಾದ ಶಕ್ತಿಯಾಗುವುದು.ಅಹಂಕಾರ ಅತಿರೇಕಕ್ಕೆ ತಿರುಗಿ ಅವಿವೇಕವಾಗದೇ ಅವಮಾನವನ್ನು ನಿರ್ಲಿಪ್ತ ನಗುವಿನೊಂದಿಗೆ ಸ್ವೀಕರಿಸಿ ಅಜೇಯರಾಗೋಣ.ಅಲ್ಲವೇ? 

ಬರಹ ..✍️✍️

*ಪ್ರಜ್ವಲಾ ಶೆಣೈ*

*ಕಾರ್ಕಳ*

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*