ರಾಜ್ಯ ತಂಡದಿಂದ ನರೇಗಾ ಕಾಮಗಾರಿಗಳ ವೀಕ್ಷಣೆ
ಮಸ್ಕಿ : ತಾಲೂಕಿನ ಮೆದಿಕಿನಾಳ, ಹಾಗೂ ಪಾಮನಕಲ್ಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 2024-25 ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಅನುಷ್ಠಾನಗೊಂಡ ಕಾಮಗಾರಿಗಳನ್ನು ಶುಕ್ರವಾರ ರಾಜ್ಯ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಅಧಿಕಾರಿಗಳ ತಂಡ ಪರಿಶೀಲಿಸಿತು.ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಸಹಾಯಕ ನಿರ್ದೇಶಕರಾದ (ಆಡಳಿತ) ಶಿವಾನಂದ ಬೇವೂರು, ತಾಂತ್ರಿಕ ಸಂಯೋಜಕರಾದ ಅಭಿರಾಮ್ ತಾಂತ್ರಿಕ ಸಂಯೋಜಕರು (ಸಿವಿಲ್), ಸ್ವಾಮಿ ತಾಂತ್ರಿಕ ಸಂಯೋಜಕರು (ಅರಣ್ಯ) , ರಾಜ್ಯ ಗುಣ ನಿಯಂತ್ರಣ ಮಾಪಕರಾದ ಗಂಗಾಧರ್ ಕೆ.ಸಿ ಅವರನ್ನು ಒಳಗೊಂಡ ತಂಡವು 2024-25 ನೇ ಸಾಲಿನಲ್ಲಿ ಅನುಷ್ಠಾನವಾಗಿರುವ ಕೃಷಿ ಹೊಂಡ, ಜಾನುವಾರುಗಳ ಶೆಡ್, ಟ್ರಂಚ್ ಕಮ್ ಬಂಡ್ ಕಾಮಗಾರಿಗಳು, ಸಾಮಾಜಿಕ ಅರಣ್ಯ ಇಲಾಖೆಯ ನೆಡುತೋಪು, ನರೇಗಾದಡಿ ಹೂಳು ಎತ್ತಿದ ಕೆರೆ, ನಾಲೆಗಳನ್ನು ವೀಕ್ಷಿಸಿದರು. ಕಾಮಗಾರಿಗೆ ಸಂಬಂಧಿಸಿದ ಕಡತಗಳನ್ನು ಪರಿಶೀಲಿಸಿದರು.ಶಿವಾನಂದ ಬೇವೂರು, ಗಂಗಾಧರ ಅವರು ಪಾಮನಕಲ್ಲೂರು ಗ್ರಾಮ ಪಂಚಾಯತಿಯ ಬೆಂಚಮರಡಿ ಗ್ರಾಮದ ಹಳ್ಳ ಹೂಳು ಎತ್ತಿದ ಕಾಮಗಾರಿ ವೀಕ್ಷಿಸಿ ಕಾಮಗಾರಿಯ ಅಳತೆ ಪಡೆದರು. ಕೂಲಿಕಾರರಿಗೆ ಕೆಲಸದ ಪ್ರಮಾಣದ ಕುರಿತು ಅಗತ್ಯ ಮಾಹಿತಿ ನೀಡಿ, ಅವರಿಂದ ಕೆಲಸ ಪಡೆಯಬೇಕು. ಕೂಲಿಕಾರರು ನಿರ್ವಹಿಸಿದ ಕೆಲಸದ ಅನುಸಾರ ಅಳತೆ ಪುಸ್ತಕದಲ್ಲಿ ಅಳತೆ ನಮೂದಿಸಿ ಕೂಲಿ ಪಾವತಿಸಬೇಕು ಎಂದರು.
ತೋಟಗಾರಿಕೆ ಇಲಾಖೆಯಿಂದ ಅನುಷ್ಠಾನಗೊಳಿಸಿದ ಪಪ್ಪಾಯಿ ಬೆಳೆದ ರೈತರೊಂದಿಗೆ ಚರ್ಚಿಸಿದರು. ನರೇಗಾದಡಿ ನಿರ್ಮಿಸಿದ ದನದ ಶೆಡ್ ಪರಿಶೀಲಿಸಿದರು. ವಸತಿ ಯೋಜನೆಯಡಿ ನಿರ್ಮಿಸಿದ ಮನೆಗೆ ಭೇಟಿ ನೀಡಿ ಫಲಾನುಭವಿ ಮಹಿಳೆಯಿಂದ ಮಾಹಿತಿ ಪಡೆದರು.
ತಾಂತ್ರಿಕ ಸಂಯೋಜಕರಾದ ಅಭಿರಾಮ್, ಸ್ವಾಮಿ ಅವರು ಮೆದಕಿನಾಳ ಗ್ರಾಮ ಪಂಚಾಯತಿಯ ನಾಗರಬೆಂಚಿ ಗ್ರಾಮದಲ್ಲಿ ಬೂದು ನೀರು ನಿರ್ವಹಣೆ ಕಾಮಗಾರಿ ಪರಿಶೀಲಿಸಿದರು. ತದ ನಂತರ ಅಂತರಗಂಗಿ ಗ್ರಾಮದ ಹೂಳು ಎತ್ತಿದ ಹಳ್ಳ, ಮೆದಕಿನಾಳ ಗ್ರಾಮದ ಕೆರೆ, ಸಾಮಾಜಿಕ ಅರಣ್ಯ ಇಲಾಖೆಯಿಂದ ಅಭಿವೃದ್ಧಿಪಡಿಸಿದ ನೆಡು ತೋಪು, ವಸತಿ ಯೋಜನೆ ಫಲಾನುಭವಿಯಿಂದ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರಾದ ಮಾನ್ಯ ಶಿವಾನಂದರಡ್ಡಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ತಿಮ್ಮಣ್ಣ, ಕೃಷ್ಣ ಹುನಗುಂದ, ತಾಂತ್ರಿಕ ಸಂಯೋಜಕರಾದ ಅಶೋಕ್, ತಾಂತ್ರಿಕ ಸಹಾಯಕ ಅಭಿಯಂತರರಾರ ಪಂಪಣ್ಣ, ಸೋಮಶೇಖರ್, ತೋಟಗಾರಿಕೆ ಇಲಾಖೆ ಅಧಿಕಾರಿಗಳಾದ ನೀಲಕಂಠ, ಗ್ರಾಪಂ ಸಿಬ್ಬಂದಿ ಬಿಎಫ್ಟಿ ಮಂಜುನಾಥ, ಬಿಲ್ ಕಲೆಕ್ಟರ್ ಈರಪ್ಪ ಇತರರಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ