ಹೋರಾಟಕ್ಕೆ ಸ್ಪಂದಿಸಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಇಂದು ಸಭೆ
ಸಿಂಧನೂರು : ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಎಲ್ಲಾ ವಸತಿ ನಿಲಯದ ಕಾರ್ಮಿಕ ಸಿಬ್ಬಂದಿಗಳ ಬಾಕಿ ವೇತನ ಪಾವತಿಗಾಗಿ ನಿನ್ನೆಯ ದಿನ ಮಹಾಶಕ್ತಿ ಮಹಿಳಾ ಸಂಘಟನೆ ಹಾಗೂ ದಲಿತ ವಿದ್ಯಾರ್ಥಿ ಪರಿಷತ್ ಜಂಟಿಯಾಗಿ ಪ್ರತಿಭಟನೆ ಮಾಡಿ ಸಮಾಜ ಇಲ್ಯಾಣ ಇಲಾಖೆಗೆ ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು.
ಅದರ ಭಾಗವಾಗಿ ಇಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಹಾಗೂ ತಾಲೂಕ ಮಟ್ಟದ ಅಧಿಕಾರಿಗಳು ನೆನ್ನೆಯ ಹೋರಾಟದ ವಿಷಯದ ಭಾಗವಾಗಿ ಇಂದು ಸಿಂಧನೂರಿನ ಗಂಗಾವತಿ ರಸ್ತೆಯಲ್ಲಿರುವ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಸಭೆ ಏರ್ಪಡಿಸಿದರು.
ಪ್ರಾಸ್ತಾವಿಕವಾಗಿ ಮಹಾಶಕ್ತಿ ಮಹಿಳಾ ಸಬಲೀಕರಣ ಸಂಘಟನೆ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀಮತಿ ವಿಜಯರಾಣಿ ಅವರು ಮಾತನಾಡಿ ವಸತಿ ನಿಲಯದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳ ಬಾಕಿ ವೇತನವು 11 ತಿಂಗಳು ಹಾಗೂ ಕೆಲವು 09 ತಿಂಗಳು ಬಾಕಿ ವೇತನವು ಪಾವತಿ ಮಾಡುವಲ್ಲಿ ತಮ್ಮ ಇಲಾಖೆ ಕೈಗೊಂಡಿರುವ ಕ್ರಮಗಳೇನು ಎಂದು ಪ್ರಶ್ನಿಸಿದರು.
ಹಾಗೆಯೇ ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕರಾದ ಮೌನೇಶ ಜಾಲವಾಡಗಿ ಮಾತನಾಡಿ ವಸತಿ ನಿಲಯದ ಕಾರ್ಮಿಕರ ಕಲ್ಯಾಣಕ್ಕಾಗಿ ತಮ್ಮ ಇಲಾಖೆ ಕೈಗೊಂಡಿರುವ ಕ್ರಮಗಳೇನು ಹಾಗೂ ಪಿಎಫ್ ಹಾಗೂ ಇಎಸ್ಐ ಸೌಲಭ್ಯಗಳನ್ನು ಒದಗಿಸಲು ಕಾರ್ಮಿಕರಿಗೆ ತಮ್ಮ ಇಲಾಖೆಯು ಕೈಗೊಂಡ ಸಂಪೂರ್ಣ ನಿಯಮಾವಳಿಗಳನ್ನು ಮತ್ತು ಕ್ರಮಗಳನ್ನು ವಿವರಿಸಬೇಕೆಂದರು.
ನಂತರದಲ್ಲಿ ಮುಖಂಡರ ಪ್ರಶ್ನೆಗೆ ಉತ್ತರಿಸಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಮಹೇಶ ಪೋತದಾರ ಅವರು ನಿನ್ನೆ ದಿನ ಎಂಎಂಎಸ್ ಹಾಗೂ ಡಿವಿಪಿ ಸಂಘಟನೆಯಿಂದ ನಡೆದ ಹೋರಾಟವು ಈಗಾಗಲೇ ರಾಜ್ಯ ಮಟ್ಟಕ್ಕೆ ಹೋಗಿ ಮುಟ್ಟಿದೆ ಹಾಗೂ ನಿಮ್ಮ ಈ ಹೋರಾಟ ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ ಹಾಗೂ
ರಾಯಚೂರು ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಎಲ್ಲಾ ವಸತಿ ನಿಲಯದ ಕಾರ್ಮಿಕರಿಗೆ ಪ್ರತಿ ತಿಂಗಳು ವೇತನವಾಗಬೇಕಾದರೆ ಒಂದು ಕೋಟಿಯ ಅಗತ್ಯತೆ ಇದೆ, ವರ್ಷಕ್ಕೆ 12 ಕೋಟಿ ರೂಪಾಯಿ ಬೇಕಾಗುತ್ತದೆ, ಆದರೆ ಕಳೆದ ವರ್ಷ ಆರರಿಂದ ಏಳು ಕೋಟಿ ರೂಪಾಯಿ ಬಿಡುಗಡೆಯಾಗಿದ್ದು ಕಾರ್ಮಿಕರ ವೇತನ ಬಾಕಿ ಉಳಿಯಲು ಮೂಲ ಕಾರಣವಾಗಿದೆ.
ಆದರೆ ಈ ವರ್ಷ 2024ರಲ್ಲಿ 10 ಕೋಟಿ 50 ಲಕ್ಷ ಕೋಟಿ ರೂಪಾಯಿ ರಾಯಚೂರು ಜಿಲ್ಲೆಗೆ ಬಿಡುಗಡೆಯಾಗಿದೆ.
ಈ ವರ್ಷ ಏಪ್ರಿಲ್ ನಿಂದ ಮಾರ್ಚ್ ವರೆಗೆ ವೇತನ ಮಾಡಬಹುದು ಆದರೆ ಈ ಹಣವೂ ನಾಲ್ಕು ಹಂತದಲ್ಲಿ ಬಿಡುಗಡೆಯಾಗಲಿದ್ದು ಇನ್ನು 15ರಿಂದ 20 ದಿನಗಳಲ್ಲಿ ಮೊದಲ ಹಂತದ ಅನುದಾನ ಬಿಡುಗಡೆಯಾಗಲಿದ್ದು ಮೆಟ್ರಿಕ್ ಪೂರ್ವ ವಸತಿ ನಿಲಯದ ಕಾರ್ಮಿಕರ ಸಂಪೂರ್ಣ ನಾಲ್ಕು ತಿಂಗಳ ಬಾಕಿ ವೇತನ ಜಮೆಯಾಗುತ್ತದೆ.
ಜೊತೆಗೆ ಮೆಟ್ರಿಕ್ ನಂತರದ ವಸತಿ ನಿಲಯದ ಕಾರ್ಮಿಕರ ನಾಲ್ಕು ತಿಂಗಳ ವೇತನ ಜಮೆಯಾಗಲಿದ್ದು ಬಾಕಿ ಉಳಿಯುವ ಕಳೆದ ವರ್ಷದ ಆರು ತಿಂಗಳ ವೇತನಕ್ಕೆ ಈಗಾಗಲೇ ನಿನ್ನೆ ಆಯುಕ್ತರ ಕಚೇರಿಯಿಂದ ತಪಾಸಣೆಗೆ ಬಂದಿದ್ದ ಅಧಿಕಾರಿಗಳಿಗೆ ಆರು ಕೋಟಿ ರೂಪಾಯಿ ಅನುದಾನದ ಕೊರತೆಯ ಬಗ್ಗೆ ಪತ್ರದ ಮೂಲಕ ಒತ್ತಡ ಹೇರಲಾಗಿದೆ ಎಂದರು.
ನಂತರದಲ್ಲಿ ಮಾತನಾಡಿದ ತಾಲೂಕ ಸಹಾಯಕ ನಿರ್ದೇಶಕರಾದ ಮಾನ್ಯ ಶ್ರೀ ಉಮೇಶ ಸಿದ್ನಾಳ ಅವರು ಪಿಎಫ್ ಇಎಸ್ಐ ಹಾಗೂ ಪಿಂಚಣಿ ಸೌಲಭ್ಯ ವಂಚಿತ ಕಾರ್ಮಿಕರು ಕೂಡಲೇ ಅಗತ್ಯ ದಾಖಲೆಗಳನ್ನು ವಾರದೊಳಗೆ ತಾಲೂಕ ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಸಿ ಈ ಸೌಲಭ್ಯಗಳ ಕೊಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಎಂಎಂಎಸ್ ಸಂಘಟನೆಯ ರಾಜ್ಯ ಗೌರವ ಸಲಹೆಗಾರರಾದ ಕರಿಯಪ್ಪ ತೋರಣದಿನ್ನಿ, ಗುರುಲಿಂಗಪ್ಪ ತೋರಣದಿನ್ನಿ, ಮೌನೇಶ ತುಗ್ಗಲದಿನ್ನಿ, (ಡಿವಿಪಿ) ಸುರೇಶ ಎಲೆಕೂಡ್ಲಿಗಿ, ಮತ್ತು ಇಲಾಖೆಯ ಎಲ್ಲಾ ಮೇಲ್ವಿಚಾರಕರು ಹಾಗೂ ಎಲ್ಲ ವಸತಿ ನಿಲಯದ ಕಾರ್ಮಿಕರು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ