ಕೋರಖಣ ನಾಗರಾಜ ಶಾಲೆಯಲ್ಲಿ ಪಂಚಮಿ ಆಚರಣೆ

*ಹಬ್ಬದ ಪ್ರಯುಕ್ತ ಅನ್ನದಾಸೋಹ ಕಾರ್ಯಕ್ರಮ, ಹಿರಿಯ ಕಲಾವಿದರಿಂದ ಎರಡು ದಿನ ಭಜನೆ ಕಾರ್ಯಕ್ರಮ,ಮಕ್ಕಳ ಕುಣಿತ, ಮಹಿಳೆಯರು ಸಡಗರದ ನಾಗರ ಪಂಚಮಿ ಹಬ್ಬ ಆಚರಣೆ*

ಕೊಟ್ಟೂರು : ನಾಗರ ಪಂಚಮಿ ಎಂದರೆ ಮಹಿಳೆಯರಿಗೆ ಸಡಗರ ಸಂಭ್ರಮ. ಪಟ್ಟಣದಲ್ಲಿ ಮಂಗಳವಾರ ನಾಗರ ಪಂಚಮಿ ಹಬ್ಬವನ್ನು ಭಕ್ತರು ಕೋರಖಣದ ನಾಗರಾಜ ಪ್ರಾಥಮಿಕ ಶಾಲೆಯಲ್ಲಿರುವ ನಾಗರಕಲ್ಲಿಗೆ ಕುಟುಂಬ ಸಮೇತ ಸಡಗರದಿಂದ ಹಾಲು ಎರೆದು ಪಂಚಮಿ ಹಬ್ಬವನ್ನು ಆಚರಿಸಿದರು, ಭಕ್ತರು ತಾವು ಹೊತ್ತುಕೊಂಡ ಹರಕೆಗಳನ್ನು ಈಡೇರಿಸಿದ ನಾಗರಹಾವಿನ ಮೂರ್ತಿಗೆ ಹಾಲು ಎರೆಯುವುದರ ಮೂಲಕ ತಮ್ಮ ಹರಕೆಗಳನ್ನು ಪೂರೈಸಿದರು. ಪ್ರತಿ ವರ್ಷದಂತೆ ನಾಗರಾಜ ಭಜನಾ ಸಂಘ ಕೋರಖಣ ಇವರಿಂದ ಭಕ್ತಿ ಪೂರ್ವಕವಾಗಿ ಭಜನಾ ಕಾರ್ಯಕ್ರಮ ಬೆಳಗಿನ ಜಾವದಿಂದ ಮರುದಿನ ಬೆಳಗಿನವರೆಗೂ ಆಯೋಜಿಸಿದ್ದಾರೆ. ಹಿರಿಯರ ಜನಪದ ಭಜನಾ ಹಾಡುಗಳಿಗೆ ಮಕ್ಕಳು ನೃತ್ಯದಿಂದ ಕುಣಿದು ಕುಪ್ಪಳಿಸಿ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು.

ಪಟ್ಟಣದ ವಿವಿಧ ಕಡೆಯಲ್ಲಿ ಪಂಚಮಿಯ ಹಿಂದಿನ ದಿವಸ ರೊಟ್ಟಿ ಹಬ್ಬ ಮಾಡಿ, ತರತರಹದ ರೊಟ್ಟಿಗಳನ್ನು ಮಾಡಿ ವಿಧವಿಧವಾದ ಪಲ್ಯಗಳನ್ನು ಮಾಡಿ ಹಬ್ಬ ಆಚರಿಸುವುದು ಸಂಪ್ರದಾಯವಾಗಿ ನಡೆದುಕೊಂಡು ಬಂದಿದೆ. 

ಈ ಹಬ್ಬಕ್ಕಾಗಿ ಹೆಣ್ಣುಮಕ್ಕಳು ವರ್ಷವಿಡೀ ಕಾಯುತ್ತಿರುತ್ತಾರೆ. ಮದುವೆಯಾದ ಹೆಣ್ಣು ಮಕ್ಕಳನ್ನು ತವರಿಗೆ ಕರೆದುಕೊಂಡು ಬರುವ ಪದ್ಧತಿ ಇಂದಿಗೂ ಪ್ರಚಲಿತದಲ್ಲಿದೆ. ಶ್ರಾವಣ ಮಾಸ ಆರಂಭವಾಗುತ್ತಿದಂತೆ ಕರ್ನಾಟಕದಲ್ಲಿ ಹಬ್ಬಗಳ ಸಂಭ್ರಮ ನೋಡುವುದೇ ಆನಂದ. ಶ್ರಾವಣ ಮಾಸದ ಮೊದಲ ಹಬ್ಬವೇ ನಾಗರ ಪಂಚಮಿ. ವಿಶೇಷವಾಗಿ ಹೆಣ್ಣು ಮಕ್ಕಳು ಅತೀ ಸಡಗರ ಸಂಭ್ರಮದಿಂದ ಆಚರಿಸುವ ಹಬ್ಬವೂ ಕೂಡ. ಮೂರು ದಿನಗಳ ಕಾಲ ಆಚರಿಸುವ ಪಂಚಮಿ ಹಬ್ಬ ವಿಶೇಷವಾಗಿ ನಡೆಯುತ್ತಲೇ ಬಂದಿದೆ. ಜೋಕಾಲಿ ಹಾಡುವುದು ಸಹ ಈ ಹಬ್ಬದ ವಿಶೇಷವಾಗಿದೆ. ಪಟ್ಟಣದ ಪತ್ತಿಕೊಂಡ ಗಣೇಶಪ್ಪ ಇವರು ೭ ಕೆ.ಜಿ. ಬೆಳ್ಳಿಯನ್ನು ನಾಗರಹಾವಿನ ಮೂರ್ತಿಗೆ ಮಾಡಿಸಲು ದಾನ ನೀಡಿದ್ದಾರೆ. ಅಲ್ಲದೇ ಭಜನಾ ಸಂಘದಿಂದ ಎರಡು ದಿನಗಳ ಅನ್ನದಾಸೋಹ ನಡೆಯುತ್ತದೆ.

ನಾಗರ ಪಂಚಮಿ ಐತಿಹ್ಯ: ಪಂಚಮಿ ಹಬ್ಬಕ್ಕೆ ಸಂಬಂಧಿಸಿದಂತೆ ಹಲವು ಜನಪದ ಐತಿಹ್ಯಗಳೂ ಇವೆ. ಒಂದು ಐತಿಹ್ಯದ ಪ್ರಕಾರ ರೈತನೊಬ್ಬ ಹೊಲ ಉಳುತ್ತಿದ್ದಾಗ, ರಂಟೆಯ ಕುಡಕ್ಕೆ ಸಿಕ್ಕ ಹಾವಿನ ಮರಿಗಳೆಲ್ಲ ಸತ್ತು ಹೋದವು. ಇದರಿಂದ ಸಿಟ್ಟಿಗೆದ್ದು ತಾಯಿ ಹಾವು ರೈತನ ಮನೆಯ ಜನರನ್ನೆಲ್ಲ ಕಚ್ಚಿ ಕೊಲ್ಲುತ್ತದೆ. ಅಷ್ಟೇ ಅಲ್ಲ, ಅತ್ತೆಯ ಮನೆಯಲ್ಲಿರುವ ರೈತನ ಮಗಳನ್ನು ಕಚ್ಚಲು ಅಲ್ಲಿಗೂ ಹೋಗುತ್ತದೆ. ಆ ಸಂದರ್ಭದಲ್ಲಿ ರೈತನ ಮಗಳು ಮಣ್ಣಿನಿಂದ ನಾಗನನ್ನು ಮಾಡಿ, ಹಾಲೆರೆಯುತ್ತಿರುತ್ತಾಳೆ. ಇದನ್ನು ಕಂಡು, ಹಾವಿನ ರೋಷ ಇಳಿಯುತ್ತದೆ.

ನಾಗರ ಪಂಚಮಿ ಮಹತ್ವ: ಸರ್ಪ ದೇವರನ್ನು ಮನೆಯ ರಕ್ಷಕ ಎಂದೂ ಪರಿಗಣಿಸಲಾಗುತ್ತದೆ. ಈ ದಿನ ನಾಗ ದೇವರನ್ನು ಪೂಜಿಸುವುದರಿಂದ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ. ಅದೇ ಸಮಯದಲ್ಲಿ, ನಿಯಮಗಳು ಮತ್ತು ವಿಧಿ-ವಿಧಾನಗಳ ಮೂಲಕ ಪೂಜೆ ಕೈಂಕರ್ಯಗಳನ್ನು ಮಾಡುವುದರಿಂದ, ಮಹಾದೇವನು ಪ್ರಸನ್ನನಾಗುತ್ತಾನೆ ಮತ್ತು ವ್ಯಕ್ತಿಯ ಪ್ರತಿಯೊಂದು ಆಸೆಯನ್ನು ಪೂರೈಸುತ್ತಾನೆ ಎಂಬುದು ಭಕ್ತರ ನಂಬಿಕೆ ಇದೆ 

ಈ ಹಬ್ಬದ ಕಾರ್ಯಕ್ರಮದಲ್ಲಿ ಭಜನಾ ಮಂಡಳಿಯ ಚಿಗಟೇರಿ ಕೊಟ್ರೇಶ್, ಕುರುಬರು ಚೆನ್ನಪ್ಪ, ಅರಮನಿ ಮಹೇಶಪ್ಪ, ಸಿ ವಿಜಯ್ ಕುಮಾರ್, ಜೆ. ಕುಮಾರಸ್ವಾಮಿ, ಕೆ.ಎಂ. ತಿಪ್ಪೇಸ್ವಾಮಿ, ಸಿ ಮಂಜುನಾಥ, ಎಂ.ನಾಗರಾಜ್, ಸಿ. ಆನಂದ, ಕೆ ನಾಗರಾಜ್, ಉಪಸ್ಥಿತರಿದ್ದರು. ಚಿಗಟೇರಿ ಕೊಟ್ರಪ್ಪ, ಕೋಡಿಹಳ್ಳಿ ರೇವಣ್ಣ, ಚಿಗಟೇರಿ ಮಂಜುನಾಥ, ವಿಜಯ, ನಟರಾಜ, ಮಣ್ಣಜ್ಜಿ ನಾಗರಾಜ, ಆನಂದ, ಸಂತೋಷ, ಪ್ರಭಾಕರ ಇತರ ಭಜನಾ ಸಂಘದಲ್ಲಿ ಪಾಲ್ಗೊಳ್ಳುತ್ತಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*