ಮಸ್ಕಿ : ಪಟ್ಟಣದ ಮೌನೇಶ್ವರ ಜಾತ್ರೆ ಅದ್ಧೂರಿ
ಮಸ್ಕಿ: ಮಸ್ಕಿ ಪಟ್ಟಣದ ಜಗದ್ಗುರು ಮೌನೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಜೋಡು ಪಲ್ಲಕ್ಕಿ ಉತ್ಸವದ ಮೆರವಣಿಗೆಯೂ ಪುರವಂತರ ಸೇವೆಯೊಂದಿಗೆ, ಮಂಗಲ ವಾದ್ಯ ಮೇಳಗಳೊಂದಿಗೆ ಶನಿವಾರ ಸಂಭ್ರಮದಿಂದ ಜರುಗಿತು.
ಪಲ್ಲಕ್ಕಿ ಉತ್ಸವ ಮುನ್ನಾ ದಿನವಾದ ಶುಕ್ರವಾರ ಗುಹಾ ದೇವಾಲಯದಲ್ಲಿರುವ ದೇವರ ಉತ್ಸವ ಮೂರ್ತಿಗಳನ್ನು ಹಾಗೂ ಪೂಜಾ ಸಾಮಗ್ರಿಗಳನ್ನು ಹೊರ ತೆಗೆದು ಸಕಲ ವಾದ್ಯ ಮೇಳಗಳೊಂದಿಗೆ ತೀರಕ್ಕೆ ತೆರಳಿ ಗಂಗಾ ಪೂಜೆಯನ್ನು ನೆರವೇರಿಸಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿ ಅಹೋರಾತ್ರಿ ಭಜನೆ ನಡೆಸಲಾಯಿತು.
ವಿಶೇಷ ಜೋಡು ಪಲ್ಲಕ್ಕಿ ಉತ್ಸವ: ಶನಿವಾರ ಬೆಳಗ್ಗೆ ಶ್ರೀ ಮೌನೇಶ್ವರರ ಹಾಗೂ ವೀರಭದ್ರದೇವರ ಉತ್ಸವ ಮೂರ್ತಿ ಹಾಗೂ ಪೂಜಾ ಸಾಮಗ್ರಿಗಳನ್ನು ಹೊತ್ತ ಜೋಡು ಪಲ್ಲಕ್ಕಿ ಉತ್ಸವದ ಮೆರವಣಿಗೆಗೆ ದೇವಸ್ಥಾನದಿಂದ ಚಾಲನೆ ದೊರೆಯಿತು. ಮೆರವಣಿಗೆ ಪಟ್ಟಣದ ಅಶೋಕ ವೃತ್ತ, ಮುಖ್ಯರಸ್ತೆ, ಚೆನ್ನಮ್ಮ ವೃತ್ತ, ದೈವದ ಕಟ್ಟೆ, ಪತ್ತಾರ ಓಣಿ, ಸಂತೆ ಬಜಾರ್, ದುರ್ಗಮ್ಮ ಗುಡಿ, ಅಶೋಕ ವೃತ್ತ ವೃತ್ತ ಮಾರ್ಗದಿಂದ ಆಗಮಿಸಿ ಶ್ರೀ ಮೌನೇಶ್ವರ ದೇವಸ್ಥಾನಕ್ಕೆ ತಲುಪಿತು. ರಾತ್ರಿಯೇ ದೇವರುಗಳ ಪೂಜಾ ಸಾಮಗ್ರಿಗಳನ್ನು ಗುಹಾದೇವಾಲಯದಲ್ಲಿ ಪುನಃ ಪ್ರವೇಶವಾಗುವ ಮೂಲಕ ಜಾತ್ರೆಯೂ ಮಂಗಲೋತ್ಸವಾಯಿತು.
ಇದೇ ಸಂದರ್ಭದಲ್ಲಿ ಪಟ್ಟಣದ ಮಹಿಳೆಯರು ಇಷ್ಟ ದೇವರಾದ ತಿಂಥಣಿ ಮೌನೇಶ್ವರ ಹಾಗೂ ಶ್ರೀ ವೀರಭದ್ರ ದೇವರುಗಳ ದರ್ಶನ ಪಡೆದು ಕಾಯಿ ಕರ್ಪೂರ, ನೈವೇದ್ಯ ಸಮರ್ಪಿಸಿದರು. ಇದೇ ಸಂದರ್ಭದಲ್ಲಿ ಭಕ್ತರಿಗೆ ಅನ್ನ ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಜೋಡು ಪಲ್ಲಕ್ಕಿ ಉತ್ಸವದ ಮೆರವಣಿಗೆಯಲ್ಲಿ ಭಕ್ತಿ ಭಾವದಿ, ವೀರಾವೇಶದಿಂದ ಪುರವಂತರ ಸೇವೆಯ ಪ್ರದರ್ಶನ ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸಿತು. ಮೆರವಣಿಗೆಯಲ್ಲಿ ಯುವಕರು ತಿಂಥಣಿ ಮೌನೇಶ್ವರ ಮಹಾರಾಜಕೀ, ಶ್ರೀ ವೀರಭದ್ರದೇವರ ಹೆಸರಲ್ಲಿ ಜಯಘೋಷಗಳನ್ನು ಕೂಗಿದರು.
ಮಸ್ಕಿ ಪಟ್ಟಣಸೇರಿ ಇತರೆ ಗ್ರಾಮಗಳಿಂದ ವಿಶ್ವಕರ್ಮ ಸಮಾಜದವರು ಹಾಗೂ ಶ್ರೀ ಮೌನೇಶ್ವರ ಭಕ್ತರು ಪಾಲ್ಗೊಂಡಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ