ಕಲ್ಯಾಣ ಎಂಬ ಪದ ಇಡೀ ಕರ್ನಾಟಕದ ಅಸ್ಮಿತೆ!
ಕಲ್ಯಾಣ ಎಂಬ ಪದ ಇಡೀ ಕರ್ನಾಟಕದ ಅಸ್ಮಿತೆ! ಕರುನಾಡಿನಲ್ಲಿ ನಡೆದ ದೊಡ್ಡ ಕ್ರಾಂತಿ, ಪ್ರಪಂಚಕ್ಕೆ ಮಾದರಿ ಎಂಬAತೆ ಸೃಷ್ಟಿಯಾದ ಹೊಸ ಇತಿಹಾಸ ಎಂದಿಗೂ ಅಜರಾಮರ. ಮನುಷ್ಯ ಮನುಷ್ಯರ ನಡುವೆ ಇದ್ದ ಕಂದಕವನ್ನು ದೂರ ಮಾಡಿ, ಎಲ್ಲರೂ ಸಮಾನರು ಎಂಬುದನ್ನು ಪ್ರತಿಪಾದನೆ ಮಾಡಿದ ಕಲ್ಯಾಣ ಕರ್ನಾಟಕ ಕ್ರಾಂತಿ ನಿಜಕ್ಕೂ ಇಡೀ ಜಗತ್ತಿನ ಇತಿಹಾಸದ ಭಾಗವಾಗಬೇಕಿತ್ತು. ಹೊರ ಜಗತ್ತಿನ ನಂಟು ಜನಸಾಮಾನ್ಯರ ಜೊತೆಗೆ ಇರದೇ ಹೋದದ್ದು ಒಂದು ಕಡೆಯಾದರೆ ಹೊರ ಜಗತ್ತಿನೊಂದಿಗೆ ನಂಟು ಹೊಂದಿದ್ದ ನಮ್ಮವರೇ ಇದನ್ನು ಬರೋಬ್ಬರಿ 4 ಶತಮಾನಗಳ ಕಾಲ ಕತ್ತಲಲ್ಲಿ ಇಟ್ಟಿದ್ದಕ್ಕೆ ಇದು ಕೇವಲ ಕರುನಾಡಿಗೆ ಸೀಮಿತವಾದ ಇತಿಹಾಸ ಆಗಬೇಕಾಯಿತು.
12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಅಲ್ಲಮಪ್ರಭುಗಳ ಅಧ್ಯಕ್ಷತೆಯಲ್ಲಿ ರೂಪಿತವಾದ ಅನುಭವ ಮಂಟಪ ಮನುಷ್ಯರ ನಡುವೆ ಇದ್ದ ಬೇಧ, ಭಾವ ತಡೆಯುವಲ್ಲಿ ತಕ್ಕಮಟ್ಟಿನ ಯಶ ಕಂಡಿತು. ತೀರಾ ತಳಪಾಯದಲ್ಲಿ ಇದ್ದ ಅದೆಷ್ಟೋ ಸಮುದಾಯಗಳು ಅಕ್ಷರ ಜ್ಞಾನ ಕಂಡುಕೊAಡವು. ತಾವೂ ಇತರರಂತೆ ಮನುಷ್ಯರೇ ಎಂಬುದನ್ನು ಮೊಟ್ಟ ಮೊದಲ ಬಾರಿಗೆ ಮನಗಂಡರು. ಇಂತಹ ದೊಡ್ಡ ಕ್ರಾಂತಿಗೆ ನೆಲೆಯಾದ ‘ಬಸವ ಕಲ್ಯಾಣ’ ಇರುವುದು ನಮ್ಮ ಹಿಂದಿನ ಹೈದರಾಬಾದ್ ಕರ್ನಾಟಕ ಎಂದು ಗುರುತಿಸಿಕೊಂಡಿದ್ದ ಬೀದರ್ ಜಿಲ್ಲೆಯಲ್ಲಿ!
ಬೀದರ್, ಕಲಬುರಗಿ, ರಾಯಚೂರು, ಕೊಪ್ಪಳ, ಯಾದಗಿರಿ, ಬಳ್ಳಾರಿ, ವಿಜಯನಗರ ಜಿಲ್ಲೆಗಳನ್ನೊಳಗೊಂಡ ಈ ಭಾಗ ಬಹುತೇಕ ನಿಜಾಮರ ಆಳ್ವಿಕೆಯಲ್ಲಿ ಇತ್ತು. ಭಾರತಕ್ಕೆ ಸ್ವತಂತ್ರ ಬಂದ ನಂತರ ಇನ್ನೇನು ಪಾಕಿಸ್ತಾನದ ತೆಕ್ಕೆಗೆ ಹೋಗಿಬಿಡುತ್ತದೆ ಎಂಬ ಆತಂಕದಲ್ಲಿದ್ದಾಗ ಅಂದಿನ ಗೃಹಮಂತ್ರಿ ಆಗಿದ್ದ ಸರ್ದಾರ್ ವಲ್ಲಬಾ ಭಾಯ್ ಪಟೇಲ್ ಅದನ್ನು ಹುಸಿಗೊಳಿಸಿದರು. ಆಪರೇಷನ್ ಪೋಲೊ ಹೆಸರಲ್ಲಿ ನಿಜಾಮರನ್ನು ಸದೆಬಡಿದು, ಈ ಕಲ್ಯಾಣ ಕರ್ನಾಟಕ ಭಾರತದಲ್ಲಿಯೇ ಉಳಿಯುವಂತೆ ಮಾಡಿದರು. ಇದೇ ಕಾರಣಕ್ಕೆ ಕಲ್ಯಾಣ ಕರ್ನಾಟಕದ ಸ್ವತಂತ್ರ ಭಾರತಕ್ಕೆ ಸ್ವತಂತ್ರ ಬಂದ 1 ವರ್ಷದ ನಂತರ ಈ ಭಾಗ ಸ್ವತಂತ್ರವಾಯಿತು.
ನಿಜಾಮರ ಕಪಿಮುಷ್ಠಿಯಿಂದ ಹೊರಬಂದ ಕಲ್ಯಾಣ ಕರ್ನಾಟಕ ನಮ್ಮ ರಾಜ್ಯದ ಅವಿಭಾಜ್ಯ ಅಂಗವಾಯಿತು. ಸ್ವತಂತ್ರವನ್ನೂ ಕಂಡುಕೊAಡಿತು. ಆದರೆ, ರಾಜ್ಯದ ಇತರೆ ಭಾಗಗಳೊಂದಿಗೆ ಅಭಿವೃದ್ಧಿಯ ಪಥದಲ್ಲಿ ಸಾಗಲು ಹೆಣಗಾಡಿದ್ದು ಸುಳ್ಳಲ್ಲ!
ಇಂದು ಈ ಭಾಗಕ್ಕೆ ಸಂವಿಧಾನದ 371 ಜೆ ಅಡಿ ವಿಶೇಷ ಸ್ಥಾನಮಾನ ಸಿಕ್ಕಿದೆ. ಆದರೂ ಅಭಿವೃದ್ಧಿ ವಿಷಯ ಬಂದಾಗ ಇನ್ನೂ ದೂರದಲ್ಲಿಯೇ ಉಳಿದಿದೆ ಎಂಬುದು ಸುಳ್ಳಲ್ಲ. ಯಾಕೆ? ಈ ರೀತಿಯ ಹಿನ್ನಡೆ ಎಂಬುದಕ್ಕೆ ಉತ್ತರ ಒಂದೇ ಇಚ್ಛಾಶಕ್ತಿಯ ಕೊರತೆ. ಇಂದಿಗೂ ಈ ಭಾಗದಲ್ಲಿ ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ದೊಡ್ಡ ದೊಡ್ಡ ನಗರಗಳಲ್ಲೇ ಸರಿಯಾದ ರಸ್ತೆ ಸಂಪರ್ಕ ಇಲ್ಲ. ಉದ್ಯೋಗ ಸಮಸ್ಯೆಯೂ ಅಗಾಧವೇ. 2011ರ ಜನಗಣತಿ ಪ್ರಕಾರ ಈ ಭಾಗದ ಸಾಕ್ಷರತೆ ಪ್ರಮಾಣ ಶೇ.63, ರಾಜ್ಯದ ಸಾಕ್ಷರತೆ ಪ್ರಮಾಣ 75.36 ಇದೆ.
ಈ ವ್ಯಾಪ್ತಿಯ ಪ್ರತೀ ಜಿಲ್ಲೆಯೂ ತನ್ನದೇ ಆದ ಗುರುತರ ಸಮಸ್ಯೆಯಿಂದ ನಲುಗಿವೆ. ಕಲಬುರಗಿಯ ಜನಜೀವನ ಇಂದಿಗೂ ಸ್ವತಂತ್ರ ಪೂರ್ವದ ದಿನಗಳನ್ನು ನೆನಪಿಸುವಂತಿದೆ. ಬೀದರ್ ಬಿದರಿ ಕಲೆಯಿಂದ ಶ್ರೀಮಂತ ಎನ್ನಿಸಿದರೂ ಅಭಿವೃದ್ಧಿಯ ವಿಷಯದಲ್ಲಿ ತೀರಾ ಬಡವ ಎನ್ನಿಸಿದೆ. ಯಾದಗಿರಿ ಅತ್ಯಂತ ಸಣ್ಣ ಜಿಲ್ಲೆಯಾದರೂ ಇಂದಿಗೂ ಜಿಲ್ಲೆಯ ಎಲ್ಲಾ ಸ್ಥಾನಮಾನ ಹೊಂದಲು ಆಗದ ಸ್ಥಿತಿಯಲ್ಲೇ ಇದೆ. ಇನ್ನು ಬಳ್ಳಾರಿ ಜಿಲ್ಲೆ ಅತ್ಯಂತ ಶ್ರೀಂತರನ್ನು ಹೊಂದಿದೆ ಜಿಲ್ಲೆಯಾದರೂ ಜನಸಾಮಾನ್ಯರು ಮಾತ್ರ ಇಂದಿಗೂ ಕಲ್ಯಾಣ ಕರ್ನಾಟಕದ ಹೆಗ್ಗುರುತಾದ ಅಭಿವೃದ್ಧಿ ಹೀನ ಸ್ಥಿತಿಯಿಂದ ಆಚೆ ಬಂದಿಲ್ಲ. ಕೊಪ್ಪಳ, ರಾಯಚೂರುಗಳು ಸಹ ಇದೇ ದಾರಿಯಲ್ಲಿಯೇ ಇವೆ. ಇನ್ನು ಹೊಸದಾಗಿ ಉದಯವಾಗಿರುವ ವಿಜಯನಗರ ಜಿಲ್ಲೆ ಇನ್ನೂ ಜಿಲ್ಲೆ ಎನ್ನಿಸಿಕೊಳ್ಳಲೇ ಲಾಯಕ್ಕಾಗಿಲ್ಲವೇನೋ ಎಂಬAತೆ ಇದೆ. ಇಂದಿಗೂ ತನ್ನ ಸ್ವಂತಿಕೆ ಕಂಡುಕೊಳ್ಳುವ ಯಾದಿಯಲ್ಲಿಯೇ ಇದೆ.
ಈ ಸ್ಥಿತಿಗೆ ಮೇಲೆ ಹೇಳಿದ ಹಾಗೆ ಇಚ್ಛಾ ಶಕ್ತಿ ಕೊರತೆ ಇದೆ. ಇಡೀ ಏಷಿಯಾದಲ್ಲಿಯೇ ಅತಿ ಹೆಚ್ಚು ಉಕ್ಕು ಉತ್ಪಾದನೆ ಮಾಡುವಂತಹ ಜೆಎಸ್‌ಡಬ್ಲು ಸೇರಿದಂತೆ ದೊಡ್ಡ ದೊಡ್ಡ ಕೈಗಾರಿಕೆಗಳು ನಮ್ಮ ವಲಯದಲ್ಲಿ ಇವೆ. ಆದರೂ ನಮ್ಮ ಜನರಿಗೆ ಸರಿಯಾದ ಉದ್ಯೋಗ ಅವಕಾಶ ಸಿಗುವುದಿಲ್ಲ. ಸರೋಜಿನಿ ಮಹಿಷಿ ವರದಿಯಂತೆ ಸ್ಥಳೀಯರಿಗೆ ಉದ್ಯೋಗ ನೀಡುವ ಕಾನೂನು ಕೇವಲ ಪುಸ್ತಕಕ್ಕೇ ಮಾತ್ರ ಸೀಮಿತ ಆಗಿದೆ. ದೂರದ ಬಿಹಾರ, ರಾಜಸ್ಥಾನ, ಉತ್ತರ ಪ್ರದೇಶದ ಕಾರ್ಮಿಕರು ಇಂದಿಗೂ ಅದೆಷ್ಟೋ ಕಾರ್ಖಾನೆಗಳಲ್ಲಿ ದುಡಿದು ತಮ್ಮೂರಿನಲ್ಲಿರುವ ಸಂಸಾರಗಳನ್ನು ಪೋಷಿಸುಯತ್ತಿದ್ದಾರೆ. ಸ್ಥಳೀಯರನ್ನು ಸೇರಿಸಿಕೊಂಡರೆ ಸಂಘಟನೆ, ಹೋರಾಟ ಮುಂತಾದ ಸಮಸ್ಯೆ ಎದುರಾಗುತ್ತವೆ. ಮೇಲಾಗಿ ಹೆಚ್ಚಿನ ಕೂಲಿ ಕೊಡಬೇಕು. ದೂರದ ರಾಜ್ಯಗಳಿಂದ ಬರುವ ಈ ಕಾರ್ಮಿಕರಿಗೆ ಒಂದೆರಡು ಹೊತ್ತಿನ ಊಟಕ್ಕೆ ಆಗುವಷ್ಟು ಕೂಲಿ ಕೊಟ್ಟರೂ ಹಗಲು, ಇರುಳು ಎನ್ನದೆ ದುಡಿಯುತ್ತಾರೆ ಎಂಬುದು ಕಾರ್ಪೋರೇಟ್ ಜಗತ್ತಿನ ಲೆಕ್ಕಾಚಾರ!
ಕೃಷಿ ವಿಷಯದಲ್ಲೂ ನಾವು ತುಂಬಾ ಹಿಂದೆ ಬಿದ್ದಿದ್ದೇವೆ. ಕಮಲಾಪುರ ಬಾಳೆಗೆ ಪ್ರಾದೇಶಿಕ ಸೂಚ್ಯಂಕ ಸಿಕ್ಕಿದೆ. ನಮ್ಮ ಕಲಬುರಗಿ, ಬೀದರ್ ತೊಗರೆ ನಾಡಾಗಿವೆ. ಗಂಗಾವತಿ ಅಕ್ಕಿಗೆ ಹೆಸರುವಾಸಿ, ಬಳ್ಳಾರಿ ಮೆಣಸಿನಕಾಯಿ ಬೀಡು, ಹೊಸಪೇಟೆ ಕಬ್ಬಿಗೆ ಹೆಸರುವಾಸಿ, ಇದರ ಜೊತೆಗೆ ದ್ವಿದಳ ಧಾನ್ಯ ಬೆಳೆಯುವಲ್ಲಿ ನಾವು ಎತ್ತಿದ ಕೈ. ಆದರೂ ನಾವು ಬಡತನದ ಬೇಗೆಯಿಂದ ಹೊರಬಂದವರಲ್ಲ. ಇದಕ್ಕೆ ಕಾರಣ ಯಾವುದೇ ಬೆಳೆಗೂ ಸರಿಯಾದ ವೈಜ್ಞಾನಿಕ ಬೆಲೆ ಸಿಗದೇ ಇರುವುದೇ ಆಗಿದೆ.
ಆಡಳಿತಾತ್ಮಕವಾಗಿ ದೇಶದ ಅತೀ ದೊಡ್ಡ ವಲಯ ಆಗಿರುವ ನಮ್ಮ ಕಲ್ಯಾಣ ಕರ್ನಾಟಕ ಪ್ರವಾಸೋದ್ಯಮದಲ್ಲಿ ವಿಶ್ವದ ಭೂಪಟದಲ್ಲಿ ಸ್ಥಾನಮಾನ ಗಳಿಸಿದೆ. ಮುತ್ತು, ರತ್ನ, ಹವಳಗಳನ್ನು ಬೀದಿಯಲ್ಲಿ ರಾಶಿ ಹಾಕಿ ಮಾರುತ್ತಿದ್ದರು ಎಂಬ ಹೆಗ್ಗಳಿಕೆಗೆ ಪಾತ್ರವಾದ ರೋಮ್ ನಗರದ ನಂತರ ಅತ್ಯಂತ ವ್ಯವಸ್ಥಿತ ಶ್ರೀಮಂತ ನಗರ ಎಂಬ ಗರಿಮೆ ಇರುವ, ಯುನೆಸ್ಕೋ ಪಟ್ಟಿಯಲ್ಲಿ ನೋಡಲೇ ಬೇಕಾದ ಸ್ಥಳಗಳ ಪಟ್ಟಿಯಲ್ಲಿ ಸ್ಥಾನಮಾನ ಪಡೆದ ವಿಜಯನಗರ ಹಂಪಿ ಇರುವುದು ನಮ್ಮ ಪ್ರದೇಶದಲ್ಲೇ. ಕರ್ನಾಟಕದ ಅಸ್ಮಿತೆಗಳಲ್ಲಿ ಒಂದಾಗಿರುವ ವಿಜಯನಗರವೂ ಇಂದು ನಲುಗುತ್ತಿದೆ. ಕೇಂದ್ರ ಪ್ರಾಚ್ಯ ವಸ್ತು ಇಲಾಖೆ ಹಂಪಿಯ ಉಳಿವಿಗೆ ಕಿಂಚಿತ್ತೂ ಗಮನ ಕೊಡುತ್ತಿಲ್ಲ. ಧಾರ್ಮಿಕ ಸಂಘರ್ಷಕ್ಕೆ ದ್ಯೋತಕವಾಗಿರುವ ಈ ಹಂಪಿಯ ವಿಷಯದಲ್ಲೂ ರಾಜಕೀಯ ತೆರೆಮರೆಯಲ್ಲಿ ನಡೆಯುತ್ತಿರುವುದು ಜಗಜ್ಜಾಹಿರ.
ಬೀದರ್, ಕಲಬುರಗಿ ಸೇರಿದಂತೆ ನಮ್ಮ ಪ್ರದೇಶದಲ್ಲಿ ಅತ್ಯಂತ ಪ್ರಾಚೀಲ ಕಾಲದ ಜನಜೀವನ ಇರುವ ತಾಣಗಳಿವೆ. ಇವುಗಳನ್ನು ಬೆಳಕಿಗೆ ತರುವ ಪ್ರಪಂಚದ ಇತಿಹಾಸದ ಜೊತೆ ತುಲನೆಮಾಡುವ ಕಾರ್ಯವನ್ನೂ ಯಾವುದೇ ಸರ್ಕಾರಗಳು ಇದುವರೆಗೆ ಮಾಡಿಲ್ಲ. ಇದಕ್ಕೆ ಕಾರಣ ಸೃಷ್ಟಿತ ಇತಿಹಾಸ ಮರೆಯಾದೀತು ಎಂಬ ಭಯವಿರಬಹುದು!
ಇಂತಿಷ್ಟು ಕಷ್ಟಗಳನ್ನ ಹೊಂದಿರುವ ಕಲ್ಯಾಣದಲ್ಲಿ ನಮ್ಮದೊಂದು ಹೊಸ ಯತ್ನ. ಕೇವಲ ದೂರುವುದರಿಂದ ಎಲ್ಲವೂ ಸರಿಯಾಗುವುದಿಲ್ಲ. “ಬದಲಾವಣೆ ಬೇಕಾದರೆ ಮೊದಲು ನಿನ್ನಲ್ಲಿ ಅದನ್ನು ನಿನ್ನಲ್ಲಿ ಕಾಣು” ಎಂಬ ಗಾಂಧೀಜಿಯವರ ಯುಕ್ತಿಯನ್ನು ಮುಂದಿಟ್ಟುಕೊAಡು ನಾವೀಗ ಹೊಸ ಅಡಿ ಇಟ್ಟಿದ್ದೇವೆ. ದಿಟ್ಟತನದೊಂದಿಗೆ ನಮ್ಮ ಸಮಸ್ಯೆಗಳನ್ನು ಬಯಲು ಮಾಡುವ ಆ ಸಮಸ್ಯೆಗಳಿಗೆ ಪರಿಹಾರ ಸಿಗುವ ತನಕ ಬೆನ್ನು ಹತ್ತುವ ಛಲ ನಮ್ಮದು. ನಮಗೆ ಬೇಕಿರುವುದ ನಿಮ್ಮೆಲ್ಲರ ಸಹಕಾರ. ಸಂವಿಧಾನದ ನಾಲ್ಕನೆಯ ಅಂಗ ಎನ್ನಿಸಿಕೊಂಡಿರುವ ನಮ್ಮ ಪತ್ರಿಕಾ ರಂಗಕ್ಕೆ ದೊಡ್ಡ ಪರಿಣಾಮ ಬೀರಬಲ್ಲ ಶಕ್ತಿ ಇಂದಿಗೂ ಇದೆ. ಆದರೆ, ಅದನ್ನೂ ಕೊಂಡುಕೊಳ್ಳುವAತಹ ಕಾರ್ಪೋರೇಟ್ ಜಗತ್ತಿನ ನಡುವೆ ನಿಜವಾದ ಪತ್ರಿಕಾ ರಂಗದ ಆಶಯಗಳು ಮರೆಯಾಗುತ್ತಿವೆ. ಸಾಮಾಜಿಕ ಜವಾಬ್ದಾರಿ ಹೊಂದಿರುವ ನಾಗರಿಕರು, ಬುದ್ದಿಜೀವಿಗಳು ಇಂದಿಗೂ ಒಂದು ದನಿಯಾಗಿ ತಮಗೊಂದು ವೇದಿಕೆ ಬೇಕು ಎಂದು ಭಾವಿಸುವುದರಲ್ಲಿ ತಪ್ಪಿಲ್ಲ. ಅಂತಹ ದನಿ, ವೇದಿಕೆಯನ್ನು ನಾವು ಕೊಡಬೇಕು ಎಂದುಕೊAಡಿದ್ದೇವೆ. ಇದಕ್ಕೆ ಬೇಕಿರುವುದು ನಿಮ್ಮ ಬೆಂಬಲ, ಸಹಾಯ, ಬೆನ್ನು ತಟ್ಟುವ ಇಂಗಿವಷ್ಟೇ! ಅಹ್ಞಾಂ ಇನ್ನೊಂದು ಮಾತು ನಾವು ಆಧುನಿಕತೆಗೆ ತಕ್ಕಂತೆ ಕೇವಲ ಕಾಗದದಲ್ಲಿ ಮಾತ್ರ ಬರುವುದಿಲ್ಲ. ಬದಲಿಗೆ ಡಿಜಿಟಲ್ ರೂಪದಲ್ಲೂ ನಿಮ್ಮ ಅಂಗೈನ ಮೊಬೈಲ್‌ನ ಕಿಂಡಿಯಲ್ಲಿ ಕಾಣಿಸಿಕೊಳ್ಳಲಿದ್ದೇವೆ. ಇಂದಿನಿAದ ನಮ್ಮ ಕಲ್ಯಾಣ ಸಾಕ್ಷಿಯ ಪರ್ವ ಆರಂಭ ಆಗುತ್ತಿರುವುದು ನಿಜಕ್ಕೂ ಸಂತಸದ ಕ್ಷಣ!

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ