ಸೆಂಥಿಲ್ ವಜಾಗೊಳಿಸಿದ್ದು ಅಸಂವಿಧಾನಿಕ!




ತಮಿಳುನಾಡಿನ ಸೆಂಥಿಲ್‌ರನ್ನು ಸಂಪುಟದಿಂದ ಉಚ್ಛಾಟನೆ ಮಾಡಿರುವುದು ಪ್ರಜಾಪ್ರಭುತ್ವ ವಿರೋಧಿ ನೆಲೆ ಮತ್ತು ಅಸಂವಿಧಾನಿಕವಾಗಿದೆ.

ಸ್ಟಾಲಿನ್ ಸಂಪುಟದಲ್ಲಿ ಅಬಕಾರಿ ಸಚಿವರಾಗಿದ್ದ ಸೆಂಥಿಲ್ ಬಾಲಾಜಿ ಉದ್ಯೋಗಕ್ಕಾಗಿ ಹಣ ಪಡೆದ ಆರೋಪ ಎದುರಿಸುತ್ತಿದ್ದರು. ಈ ಹಿಂದೆ ಜಯಲಲಿತಾ ಅವರ ಸಂಪುಟದಲ್ಲಿ ಸಾರಿಗೆ ಸಚಿವರಾಗಿದ್ದ ಬಾಲಾಜಿ ತಮ್ಮ ಇಲಾಖೆಯಲ್ಲಿನ ಉದ್ಯೋಗ ನೀಡಲು ಹಣ ಪಡೆದ ಆರೋಪ ಎದುರಿಸುತ್ತಿದ್ದಾರೆ. ಜೂ.೧೪ರಂದು ಜಾರಿ ನಿರ್ದೇಶನಾಲಯ ಅವರನ್ನು ಬಂಧಿಸಿತ್ತು. ಈಗ ರಾಜ್ಯಪಾಲರು ಅವರನ್ನು ಸಂಪುಟದಿಂದ ವಜಾಮಾಡಿದ್ದಾರೆ. ಇದು ಅಸಂವಿಧಾನಿಕ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದ ಆಯ್ಕೆಯಾದ ಜನಪ್ರತಿನಿಧಿಗೆ ಸಂಪೂರ್ಣ ಅಧಿಕಾರ ಇರುತ್ತದೆ. ರಾಜ್ಯಪಾಲ ಹುದ್ದೆ ಒಂದು ಹೆಸರಿಗೆ ಮಾತ್ರ ಇರುವ ಉನ್ನತ ಹುದ್ದೆ. ಹುದ್ದೆಗೆ ಕೆಲವೇ ಕೆಲವು ಸಂದರ್ಭದಲ್ಲಿ ವಿವೇಚನಾ ಅಧಿಕಾರ ಬಳಕೆಮಾಡಿಕೊಳ್ಳಬಹುದು. ಉಳಿದಂತೆ ಅವರು ಸಂವಿಧಾನದ ಅನ್ವಯ ಮುಖ್ಯಮಂತ್ರಿ, ಸಚಿವ ಸಂಪುಟದ ತೀರ್ಮಾನದಂತೆಯೇ ನಡೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ತಮ್ಮ ಸ್ವಂತ ನಿರ್ಧಾರವನ್ನು ಹೇರುವಂತಿಲ್ಲ.



ಸಂವಿಧಾನದ ಅನುಚ್ಛೇದ 154(1)ರಂತೆ ರಾಜ್ಯಾಡಳಿತದ ಕಾರ್ಯಕಾರಿ ಅಧಿಕಾರ ರಾಜ್ಯಪಾಲರಲ್ಲಿದೆ. ಅವರು ನೇರವಾಗಿ ಇಲ್ಲವೇ ತಮ್ಮ ಅಧೀನಾಧಿಕಾರಿಗಳ ಮೂಲಕ ಅದನ್ನು ನಿಭಾಯಿಸಬಹುದು ಎಂದು ಹೇಳಲಾಗುತ್ತದೆ.

ಮೇಲ್ನೋಟಕ್ಕೆ ಇದು ರಾಜ್ಯಪಾಲರಿಗೆ ಸಂಪೂರ್ಣ ವಿವೇಚನಾ ಅಧಿಕಾರ ಕೊಟ್ಟಿದೆ ಅಲ್ವಾ ಅನ್ನಿಸುತ್ತದೆ. ಆದರೆ, ಕಲಂ 163(1) ಈ ಅಧಿಕಾರಕ್ಕೆ ಅಂಕುಶ ಹಾಕುತ್ತದೆ. ಈ ಕಲಂ ಹೇಳುವಂತೆ ರಾಜ್ಯಪಾಲರು ಯಾವುದೇ ಕಾರಣಕ್ಕೂ ತಮ್ಮ ಸ್ವಂತ ನಿರ್ಧಾರವನ್ನು ಹೇರುವ ಹಾಗಿಲ್ಲ. ಬದಲಿಗೆ ಅವರು ತಮ್ಮ ಆಡಳಿತಕ್ಕೆ ಸಹಾಯ ಮಾಡಲು ಇರುವ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟದ ಸಲಹೆಯಂತೆ ನಡೆದುಕೊಳ್ಳಬೇಕು. ಕೆಲವೇ ಕೆಲವು ಸಂದರ್ಭದಲ್ಲಿ ತಮ್ಮ ವಿವೇಚನಾ ಅಧಿಕಾರ ಬಳಸಿಕೊಳ್ಳಬಹುದು ಎಂದು ಹೇಳುತ್ತದೆ.

ಹಾಗಾದೆ ವಿವೇಚನಾ ಅಧಿಕಾರ ಬಳಸಿಕೊಳ್ಳುವ ಸಂದರ್ಭಗಳು ಯಾವವು? ಒಂದು ವೇಳೆ ಏಕಾಏಕಿ ಮುಖ್ಯಮಂತ್ರಿ ತೀರಿಹೋದರೆ, ಒಂದು ವೇಳೆ ಯಾವುದೇ ಒಂದು ಪಕ್ಷಕ್ಕೆ ಸ್ಪಷ್ಟ ಬಹುಮತ ಇಲ್ಲದೇ ಹೋದರೆ, ಯಾರಿಗೆ ಸರ್ಕಾರ ರಚಿಸಲು ಅವಕಾಶ ಕೊಡಬೇಕು ಎಂಬಂತಹ ಕೆಲವೇ ಕೆಲವು ವಿಷಯಗಳಲ್ಲಿ ರಾಜ್ಯಪಾಲ ಹುದ್ದೆ ತನ್ನ ಸ್ವ ಅಲೋಚನಾ ಶಕ್ತಿಯನ್ನು ಬಳಸಿಕೊಳ್ಳಬಹುದು. ಅದರ ಹೊರತಾಗಿ ಉಳಿದಂತೆ ಎಲ್ಲಾ ಸಂದರ್ಭದಲ್ಲಿಯೂ ಮುಖ್ಯಮಂತ್ರಿ, ಸಚಿವ ಸಂಪುಟದ ತೀರ್ಮಾನದಂತೆಯೇ ನಡೆದುಕೊಳ್ಳಬೇಕು. ವಿಧೇಯಕಕ್ಕೆ ಅಂಕಿತ ಹಾಕುವ ವಿಷಯದಲ್ಲಿ ಸಹ ರಾಜ್ಯಪಾಲರು ಸಣ್ಣದೊಂದು ವಿವೇಚನಾಧಿಕಾರ ಹೊಂದಿದ್ದಾರೆ. ಅದರಂತೆ ರಾಜ್ಯಪಾಲರು ಎರಡೂ ಸದನದಲ್ಲಿ ಬಿಲ್ ಮಂಡನೆ ಆದ ಬಳಿಕ ಅಂತಿಮ ಅಂಕಿತಕ್ಕೆ ಬಂದ ನಂತರ ಅದಕ್ಕೆ ಸಹಿಹಾಕುವ(ಹಣಕಾಸಿನ ಬಿಲ್‌ಗೆ ವಿಧಾನ ಸಭೆಯ ಆಂಗೀಕಾರ ಮಾತ್ರ ಸಾಕು. ಹಣಸಾಸಿನೇತರ ಬಿಲ್‌ಗಳಿಗೆ ಎರಡೂ ಮನೆಯ ಅನುಮೋದನೆ ಬೇಕು) ವಿಷಯದಲ್ಲಿ ವಿವೇಚನಾಧಿಕಾರ ಹೊಂದಿರುತ್ತಾರೆ. ಮೊದಲ ಬಾರಿ ಬಂದ ಬಿಲ್ಲನ್ನು ರಾಜ್ಯಪಾಲ ಅಂಕಿತ ಹಾಕದೆ ಮತ್ತೊಮ್ಮೆ ಪರಿಶೀಲಿಸುವಂತೆ ಸೂಚಿಸಬಹುದು. ಆದರೆ, ಎರಡನೆಯ ಬಾರಿಯೂ ಬಿಲ್ ಪಾಸಾದರೆ ಅದನ್ನು ಹಿಂದಿರಿಗಿಸುವ ಅಧಿಕಾರ ಅವರಿಗೆ ಇಲ್ಲ. ಯಾವುದೇ ಆಕ್ಷೇಪ ಇಲ್ಲದೆ ಅಂಕಿತ ಹಾಕಬೇಕು. ಇನ್ನು ೬ ತಿಂಗಳಿಗೊಮ್ಮೆ ಅಧಿವೇಶನ ಸೇರುವ ವಿಷಯದಲ್ಲಿ ರಾಜ್ಯಪಾಲರು ವಿವೇಚನಾಧಿಕಾರ ಹೊಂದಿದ್ದರೂ ಕ್ಯಾಬಿನೆಟ್ ಸಲಹೆ ಪಡೆಯುವ ಅಗತ್ಯ ಇದೆ.

ಈ ಹಿಂದೆ ರಾಜ್ಯದಲ್ಲಿ ರಾಜ್ಯಪಾಲರಾಗಿದ್ದ ಹಂಸರಾಜ್ ಭಾರದ್ವಾಜ್ ಸಹ ಇದೇ ರೀತಿಯಲ್ಲಿ ತಮ್ಮ ಅಧಿಕಾರ ವ್ಯಾಪ್ತಿ ಮೀರಿ ನಡೆದುಕೊಂಡಿದ್ದರು. ಯಡಿಯೂರಪ್ಪ ಅವರ ಮೇಲೆ ಲಂಚದ ಆರೋಪಗಳು ಕೇಳಿಬಂದಾಗ ಹೈ ಕೋರ್ಟ್ ಮುಖ್ಯಮಂತ್ರಿಯೊಬ್ಬರ ವಿಚಾರಣೆ ಮಾಡಲು ರಾಜ್ಯಪಾಲರ ಅನುಮತಿ ಬೇಕು ಎಂದು ತಿಳಿಸಿತ್ತು. ಆಗ ಭಾರದ್ವಾಜ್ ಅವರು ವಿವೇಚನಾ ಅಧಿಕಾರ ಬಳಸಿ, ಮುಖ್ಯಮಂತ್ರಿ ಬಂಧನಕ್ಕೆ ಸಮ್ಮತಿಸಿದ್ದರು. ಇದರ ಕುರಿತು ಸಹ ಸಾಕಷ್ಟು ವಿವಾದ ಎದ್ದಿದ್ದವು. ಸಾಕಷ್ಟು ಚರ್ಚೆ ಸಹ ನಡೆದವು.

ಇಂತಹ ಹಲವು ಪ್ರಸಂಗಗಳು ನಡೆದಿವೆ. 2016ರಲ್ಲಿ ಅರುಣಾಚಲ ಪ್ರದೇಶದಲ್ಲಿ ಮುಖ್ಯಮಂತ್ರಿ ಆಗಿದ್ದ ನಬಂ ತುಕಿ ಅವರನ್ನು ರಾಜ್ಯಪಾಲ ಜೆ.ಪಿ. ರಾಜ್‌ಕೊವ ಏಕಾಏಕಿ ವಜಾಗೊಳಿಸಿ, ಅವರ ಜಾಗಕ್ಕೆ ಜಾರ್ಬಂ ಗಾಮ್ಲಿನ್‌ರನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸುತ್ತಾರೆ. ಕೊನೆಗೆ ಈ ವಿಷಯದ ನ್ಯಾಯಾಲಯದ ಮುಂದೆ ಬಂದಾಗ ರಾಜ್ಯಪಾಲರ ನಡೆಯನ್ನು ನ್ಯಾಯಾಲಯ ಅಸಂವಿಧಾನಿಕ ಎಂದು ತೀರ್ಪು ನೀಡುತ್ತದೆ.



ಇದೇ ರೀತಿ ತಮಿಳುನಾಡಿನ ರಾಜ್ಯಪಾಲರು ಹಲವು ಬಾರಿ ನಡೆದುಕೊಂಡಿದ್ದಾರೆ. ವಿವಿಧ ವೃತ್ತಪತ್ರಿಕೆ, ಸಾಮಾಜಿಕ ಜಾಲತಾಣ ಮಾಹಿತಿಯಂತೆ ಎನ್‌ಇಟಿ ವಿರೋಧಿ ವಿಚಾರ ಸೇರಿದಂತೆ ಸುಮಾರು ೨೦ ವಿಧೇಯಕಗಳನ್ನು ರಾಜ್ಯಪಾಲರು ಅಂಕಿತ ಹಾಕದೆ ತಮ್ಮ ಬಳಿ ಇಟ್ಟುಕೊಂಡಿದ್ದಾರೆ ಎನ್ನಲಾಗುತ್ತಿದೆ.

1994ರಲ್ಲಿ ನಮ್ಮದೇ ರಾಜ್ಯದಲ್ಲಿ ನಡೆದ ಮತ್ತೊಂದು ಘಟನೆ ರಾಜ್ಯಪಾಲರ ಮತ್ತೊಂದು ವಿವಾದಾತ್ಮಕ ನಡೆ ಕುರಿತು ಚರ್ಚೆಗೆ ಎಡೆಮಾಡಿಕೊಟ್ಟಿತು. ಈ ವೇಳೆ ಜನತಾದಳದಿಂದ ಮುಖ್ಯಮಂತ್ರಿ ಆಗಿದ್ದ ಎಸ್.ಆರ್. ಬೊಮ್ಮಾಯಿ ಸರ್ಕಾರವನ್ನು ಅಂದಿನ ರಾಜ್ಯಪಾಲರಾಗಿದ್ದ ವೆಂಕಟಸುಬ್ಬಯ್ಯ ಅವರು ವಜಾಗೊಳಿಸುತ್ತಾರೆ. ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ವಿಶ್ವಾಸ ಮತ ಯಾಚನೆಗೂ ಅವಕಾಶ ಮಾಡಿಕೊಡದೆ ಸರ್ಕಾರವನ್ನು ವಜಾಮಾಡುತ್ತಾರೆ. ಈ ವೇಳೆ ಜನತಾ ದಳದಿಂದ ಬಹು ದೊಡ್ಡ ಸಂಖ್ಯೆಯ ಶಾಸಕರು ಪಕ್ಷ ತೊರೆದು ಹೋಗಿರುತ್ತಾರೆ.

ಇಲ್ಲಿ ಪ್ರಶ್ನೆ ಎದ್ದದ್ದು ರಾಜ್ಯಪಾಲರು ಚಲಾಯಿಸಿದ ಅಧಿಕಾರ ಸಂವಿಧಾನ ಬದ್ಧವೇ? ಒಬ್ಬ ಮುಖ್ಯಮಂತ್ರಿ ಅಥವಾ ಒಂದು ಸರ್ಕಾರ ವಿಶ್ವಾಸ ಮತ ಯಾಚನೆ ಮಾಡದೆ ರಾಷ್ಟ್ರಪತಿ ಆಳ್ವಿಕೆ ಹೇರುವುದು ಸರಿಯಲ್ಲ ಎಂಬ ವಾದವನ್ನು ಸಂವಿಧಾನ ಪಂಡಿತರು ಮಂಡಿಸಿದರು.

ಇಂತಹ ಅನೇಕ ಸಂದರ್ಭಗಳು ನಮ್ಮ ದೇಶದಲ್ಲಿ ಬಂದಿವೆ. ಇದಕ್ಕೆ ಕಾರಣ ಒಂದು ಕಡೆ ಸಂವಿಧಾನದಲ್ಲಿರುವ ಭಾಷಾ ಬಳಕೆ ಆದರೆ ಮತ್ತೊಂದು ನಮ್ಮ ಅಧಿಕಾರ ವಿಕೇಂದ್ರೀಕರಣದ ಗೊಂದಲಗಳು ಸಹ ಆಗಿವೆ. ನಮ್ಮದು ಒಕ್ಕೂಟ ವ್ಯವಸ್ಥೆಯೂ ಅಲ್ಲ, ಸಂಸ್ಥಾನ ವ್ಯವಸ್ಥೆಯೂ ಅಲ್ಲ. ಎರಡೂ ರೀತಿಯ ಲಕ್ಷಣಗಳು ಇಲ್ಲಿವೆ. 

ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯದ ಅಧಿಕಾರ ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ಕೇಂದ್ರ ಪ್ರವೇಶ ಮಾಡುವ ಹಾಗಿಲ್ಲ. ಕೇಂದ್ರಕ್ಕೆ ತನ್ನದೇ ಆದ ಅಧಿಕಾರ ವ್ಯಾಪ್ತಿ ಇದ್ದರೆ ರಾಜ್ಯಕ್ಕೂ ಇದೇ ರೀತಿಯ ಅಧಿಕಾರ ವ್ಯಾಪ್ತಿ ಇರುತ್ತದೆ. ಒಂದರ್ಥದಲ್ಲಿ ಇಬ್ಬರೂ ತಮ್ಮ ತಮ್ಮ ಪರಿದಿಯಲ್ಲಿ ಸ್ವತಂತ್ರರು. ಆದರೆ, ಕೆಲವೊಮ್ಮೆ ಕೇಂದ್ರ ಅಂದರೆ ಒಕ್ಕೂಟ ಸರ್ಕಾರ ರಾಜ್ಯಗಳ ವಿಷಯದಲ್ಲಿ ಮೂಗು ತೂರಿಸುವ ಅವಕಾಶ ಇದೆ.

ರಾಜ್ಯದಲ್ಲಿ ಜನರಿಂದ ಆಯ್ಕೆಯಾದ ಸರ್ಕಾರ ಇಲ್ಲ ಎಂದಾಗ ರಾಷ್ಟ್ರಪತಿ ಮೂಲಕ ಲೋಕಸಭೆ ಆ ರಾಜ್ಯದ ಅಧಿಕಾರ ನಡೆಸಲು ಸಂವಿಧಾನದಲ್ಲಿ ಅವಕಾಶ ಇದೆ. ಅನುಚ್ಛೇದ 356ರಲ್ಲಿ ಈ ವಿಷಯಗಳ ಅಡಕ ಆಗಿವೆ. ಇದನ್ನು ಹೊರತುಪಡಿಸಿ ರಾಜ್ಯದ ಆಡಳಿತದ ವಿಷಯದಲ್ಲಿ ಯಾವುದೇ ಕಾರಣಕ್ಕೂ ಕೇಂದ್ರ ಮೂಗು ತೂರಿಸುವಂತಿಲ್ಲ. ಆದರೆ, ಈ ವಿಷಯ ಪದೇ ಪದೇ ಚರ್ಚೆಗೆ ಬರಲು ಕಾರಣ ರಾಜಕಾರಣ; ಸಾಮಾನ್ಯವಾಗಿ ಕೇಂದ್ರದಲ್ಲಿ ಒಂದು ಪಕ್ಷ, ರಾಜ್ಯದಲ್ಲಿ ಒಂದು ಪಕ್ಷ ಆಡಳಿತದಲ್ಲಿ ಇದ್ದರೆ ಈ ರೀತಿಯ ಹಗ್ಗ ಜಗ್ಗಾಟ, ಸುಪ್ರಿಮಸಿಯ ಆಟ ನಡೆಯುತ್ತದೆ.

ಈಗ ತಮಿಳುನಾಡಿನ ವಿಷಯದಲ್ಲೂ ಆಗಿರುವುದೇ ಅದು. ಇಲ್ಲಿ ಡಿಎಂಕೆ ಸರ್ಕಾರ ಆಡಳಿತ ನಡೆಸುತ್ತಿದೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಇದೆ. ಶೀಘ್ರ ಚುನಾವಣೆ ಸಹ ಬರುತ್ತಿವೆ. ಈ ಎಲ್ಲಾ ಕಾರಣಕ್ಕೆ ಈ ರೀತಿಯ ಗೊಂದಲಕಾರಿ ನಡೆಗಳು ಕಂಡುಬರುತ್ತಿವೆ. ಆದರೆ, ಇವ್ಯಾವೂ ಸಹ ಸಂವಿಧಾನಬದ್ಧ ಅಲ್ಲ. ಪ್ರಜಾಪ್ರಭುತ್ವದಲ್ಲಿ ಸಂವಿಧಾನವೇ ಅಂತಿಮ. ಇಲ್ಲಿ ಕಾನೂನು ಆಳ್ವಿಕೆ ನಡೆಸುತ್ತವೆ. ರೂಲ್ ಆಫ್ ಲಾ ಎಂದು ಕರೆಯುತ್ತೇವಲ್ಲ ಹಾಗೆ. ವ್ಯಕ್ತಿ, ಪಕ್ಷ ಅಲ್ಲ. ಹಾಗಾಗಿ ಎಲ್ಲವೂ ಕಾನೂನಾತ್ಮಕವಾಗಿಯೇ ಇರಬೇಕು.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ