ಜೋಳ ಖರೀದಿ ಅವ್ಯವಹಾರ ವಿಚಾರ;ಸರಿಯಾದ ತನಿಖೆ ನಡೆಸಿ ಶಿಕ್ಷೆ ಕೊಡಿಸಲು ಕ್ರಮ ವಹಿಸಿ:ನಾಗೇಂದ್ರ
ಬಳ್ಳಾರಿ:ಜಿಪಂ ಸಭಾಂಗಣದಲ್ಲಿ ಸಚಿವ ನಾಗೇಂದ್ರ ಕೆಡಿಪಿ ಸಭೆ ನಡೆಸಿದರು
ಬಳ್ಳಾರಿ:ಕಳೆದ ವರ್ಷ ಜೋಳ ಖರೀದಿಯಲ್ಲಿ ಆದ ಅವ್ಯವಹಾರ ತನಿಖೆಯಲ್ಲಿ ಲೋಪ ಎಸಗದೆ ತಪ್ಪಿತತರಿಗೆ ಶಿಕ್ಷೆ ಕೊಡಿಸಲು ಶ್ರಮಿಸಲು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಖಡಕ್ ಆದೇಶ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ನ ನಜೀರ್ ಸಾಬ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅನುಪಾಲನಾ ವರದಿ ಚರ್ಚೆ ವೇಳೆ ಮಾತನಾಡಿದ ಅವರು, ಜೋಳ ಖರೀದಿಯಲ್ಲಿ ಕೆಂಚನ ಗುಡ್ಡ ಗ್ರಾಮದಲ್ಲಿ ಜೋಳ ಖರೀದಿಸುವ ವಿಚಾರದಲ್ಲಿ ದೊಡ್ಡ ವಂಚನೆ ನಡೆದಿದೆ. ನನಗೆ ಈ ಕುರಿತು ಸಂಪೂರ್ಣ ಮಾಹಿತಿ ಇದೆ. ಇಂದೇ ಈ ಅಧಿಕಾರಿಗಳನ್ನು ಅಮಾನತು ಮಾಡಿ ಎಂದರು.
ಸಭೆಗೆ ಮಾಹಿತಿ ನೀಡಿದ ಯೋಜನಾ ಅಧಿಕಾರಿ ಚಂದ್ರಶೇಖರ್ ಗುಡಿ, ಜೋಳ ಖರೀದಿ ವಿಷಯದಲ್ಲಿ ಎರಡು ಪ್ರಕರಣ ದಾಖಲಾಗಿವೆ. ಒಂದು ಇಲಾಖಾವಾರು ತನಿಖೆ ಮತ್ತು ಪೊಲೀಸ್ ತನಿಖೆಗೆ ಪ್ರಕರಣ ದಾಖಲಾಗಿವೆ ಎಂದರು
ಈ ವೇಳೆ ಮಾತನಾಡಿದ ಆಹಾರ ಇಲಾಖೆ ಉಪ ನಿರ್ದೇಶಕಿ ಕೈಜರ್, ಇಲಾಖೆಯ ಇಬ್ಬರು ಅಧಿಕಾರಿಗಳಾದ ನಾರಾಯಣ ಸ್ವಾಮಿ, ಶಿವನಗೌಡ ಮೇಲೆ ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳಲಾಗಿದೆ ಎಂದರು.
ಬಳ್ಳಾರಿ ಗ್ರಾಮಾಂತರ ಸಿಪಿಐ ನಿರಂಜನ್ ಮಾತನಾಡಿ, ಇಬ್ಬರ ಮೇಲೆ ಆರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದೆ. ಪ್ರಸೆಕ್ಯುಷನ್ ಗೆ ಅನುಮತಿ ಬೇಕಿದೆ ಎಂದರು.
ಸಿರುಗುಪ್ಪ ಸಿಪಿಐ ಮಾತನಾಡಿ, ನಮ್ಮಲ್ಲಿ ಒಟ್ಟು 17 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ. 10 ಜನ ಮಧ್ಯವರ್ತಿಗಳು, 7 ಜನ ಅಧಿಕಾರಿಗಳು ಇದ್ದಾರೆ ಎಂದು ತಿಳಿಸಿದರು.
ಸಿರುಗುಪ್ಪ ಶಾಸಕ ಬಿ.ಎಂ.ನಾಗರಾಜ್ ಮಾತನಾಡಿ, ಯಾರಿಗಾದರೂ ಒಬ್ಬರಿಗೆ ಕಠಿಣ ಶಿಕ್ಷೆ ಆಗ್ಬೇಕು. ಇಲ್ಲದೇ ಹೋದರೆ ಜನ ಹೆದರಲ್ಲ. ಈ ಬಾರಿ ಸಹ ಇದೇ ರೀತಿ ಆಗುತ್ತಿದೆ. ಸಮಗ್ರ, ಶಿಸ್ತುಬದ್ಧ ತನಿಖೆ ನಡೆಸಿ ಕ್ರಮ ವಹಿಸಿ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಮಾತನಾಡಿ, ಇಬ್ಬರೂ ಅಧಿಕಾರಿಗಳು ಇಲ್ಲಿಂದ ವರ್ಗವಾಗಿ ಹೋಗಿದ್ದಾರೆ. ಉಳಿದ ಅಧಿಕಾರಿಗಳ ಪೈಕಿ ಹೊರ ಗುತ್ತಿಗೆ ಆಧಾರದಲ್ಲಿ ಇರುವವರ ಮೇಲೆ ಕ್ರಮ ಕೈಗೊಳ್ಳಿ ಎಂದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ