ವಸತಿ ಬಡಾವಣೆಯಲ್ಲಿ ಅಕ್ರಮ ವಾಣಿಜ್ಯ ಮಳಿಗೆ ನಿರ್ಮಾಣ: ವರದಿ ನೀಡಿದ್ದರೂ ಯಾವುದೇ ಕ್ರಮ ಇಲ್ಲ ಯಾಕೆ?
ಕೊಟ್ಟೂರು :ಪಟ್ಟಣದ ಜೋಳದ ಕೂಡ್ಲಿಗಿ ರಸ್ತೆಯಲ್ಲಿರುವ ನೂತನವಾಗಿ ನಿರ್ಮಾಣಗೊಂಡಿರುವ ಲೇಔಟ್‌ನಲ್ಲಿ ಅಕ್ರಮವಾಗಿ ಕಮರ್ಷಿಯಲ್ ಕಾಂಪ್ಲೆಕ್ಸ್ ನಿರ್ಮಾಣ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಹಲವಾರು ಬಾರಿ ದಿನಪತ್ರಿಕೆಗಳಲ್ಲಿ ವರದಿಯಾಗಿದ್ದರೂ ಸಹ ಯಾವುದೇ ಕ್ರಮ ಕೈಗೊಳ್ಳದ ಪಟ್ಟಣ ಪಂಚಾಯಿತಿ ಆಡಳಿತ ಹಾಗೂ ಈ ಬಗ್ಗೆ ಮನವಿಯನ್ನು ಸಲ್ಲಿಸಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿರದ ಪ್ರಯುಕ್ತ ಜನರು ರೋಸಿಹೋಗಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಧರಣಿ ಮಾಡಲಾಗುವುದೆಂಬ ಸಂದೇಶ ಹೋದ ಮೇಲೆ ಜಿಲ್ಲಾಧಿಕಾರಿಗಳು ಮೌನ ಮುರಿದು ಸದರಿ ಅಕ್ರಮ ಕಾಂಪ್ಲೆಕ್ಸ್‌ಗಳ ನಿರ್ಮಾಣದ ಜಾಗವು ಅತಿಕ್ರಮಣವಾಗಿದೆಯೇ ಎಂಬ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದರು. ವ
ರದಿ ತಯಾರಾಗಲೂ ಸಹ ಅನೇಕ ತಿಂಗಳುಗಳು ಕಳೆದ ಮೇಲೆ ಪಟ್ಟಣ ಪಂಚಾಯಿತಿಯ ಮೇಲೆ ಒತ್ತಡವನ್ನು ಅರಿತ ಸ್ಥಳೀಯ ಆಡಳಿತ, ರಸ್ತೆಗಾಗಿಯೇ ಮೀಸಲಿಟ್ಟ ಜಾಗದಲ್ಲಿ ಕಮರ್ಷಿಯಲ್ ಕಾಂಪ್ಲೆಕ್ಸ್ ನಿರ್ಮಾಣವಾಗಿರುವುದರ ಬಗ್ಗೆ ವರದಿ ತಯಾರಿಸಲು, ಸ್ಥಳ ತನಿಖೆ ಮಾಡಿ, ಅಳೆದು ತೂಗಿ ಕಾಂಪ್ಲೆಕ್ಸ್‌ಗಳ ನಿರ್ಮಾಣವಾಗಿರುವುದು ಜಾಗ ಅತಿಕ್ರಮಣವಾಗಿದೆ ಎಂದು ಜನವರಿಯಲ್ಲಿಯೇ ವರದಿ ನೀಡಿದೆ. ವರದಿ ನೀಡಿ ಸುಮಾರು ನಾಲ್ಕು ತಿಂಗಳು ಕಳೆದರೂ ಸಹ ಕಮರ್ಷಿಯಲ್ ಕಾಂಪ್ಲೆಕ್ಸ್‌ಗಳ ಮಾಲೀಕರ ಮೇಲೆ ಯಾವುದೇ ಕ್ರಮ ಜರುಗಿಸದೇ ಇರುವುದು ಯಾತಕ್ಕಾಗಿ?
ಈ ಹಿಂದೆ ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಪ.ಪಂ. ಸದಸ್ಯರು ಈ ವಿಷಯದ ಬಗ್ಗೆ ಅಧ್ಯಕ್ಷರನ್ನು ಹಾಗೂ ಮುಖ್ಯಾಧಿಕಾರಿಗಳನ್ನು ಕಾಂಪ್ಲೆಕ್ಸ್‌ಗಳನ್ನು ತೆರವುಗೊಳಿಸಲು ಯಾಕೆ ಮೀನಾಮೇಷ ಎಣಿಸುತ್ತಿದ್ದೀರಿ, ಎಂದು ಕೇಳಿದ್ದಕ್ಕೆ, ಮುಖ್ಯಾಧಿಕಾರಿಗಳು ಈ ಬಗ್ಗೆ ವರದಿಯನ್ನು ಮಾನ್ಯ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ತಮ್ಮ ಪಾಲಿನ ಜವಾಬ್ದಾರಿಯನ್ನು ಕಳೆದುಕೊಂಡಿದ್ದರು.
ಆಗಿರುವುದಿಷ್ಟೇ : ಕೊಟ್ಟೂರು ಪಟ್ಟಣದ ಜೋಳದ ಕೂಡ್ಲಿಗಿ ರಸ್ತೆಯಲ್ಲಿರುವ ಕೊಟ್ಟೂರು ಪಟ್ಟಣದ ಸರ್ವೆ ನಂ.818/3ರಲ್ಲಿ 0.65 ಎಕರೆ ಹಾಗೂ 1202ರಲ್ಲಿ 2.24 ಎಕರೆ ಸೇರಿ ಒಟ್ಟು 2.99 ಎಕರೆ ಜಮೀನಿಗೆ ಸಂಬಂಧಿಸಿದಂತೆ ವಸತಿ ಉದ್ದೇಶಕ್ಕಾಗಿ ಈಗಾಗಲೇ ಭೂ ಪರಿವರ್ತನೆ ಆಗಿರುತ್ತದೆ. ಭೂ ಪರಿವರ್ತನೆ ಮಾಡುವಾಗ ರಸ್ತೆಗಾಗಿ ಜಾಗವನ್ನು ಮೀಸಲಿರಿಸಿ, ಸದರಿ ಜಾಗವನ್ನು ರಸ್ತೆಗಾಗಿಯೇ ಬಳಸಲು ಷರತ್ತು ವಿಧಿಸಿ ಆದೇಶಿಸಿರುತ್ತಾರೆ. ಸದರಿ ವಸತಿ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡುವಾಗ ರಸ್ತೆಗಾಗಿ ಮೀಸಲಿರಿಸಿದ ಜಾಗವನ್ನು ರಸ್ತೆಗಾಗಿ ಅಲ್ಲದೇ ಬೇರೆ ಯಾವುದಕ್ಕೂ ಬಳಸಬಾರದು ಎನ್ನುವ ಷರತ್ತುಬದ್ಧ ಆದೇಶವನ್ನು ಜಿಲ್ಲಾಧಿಕಾರಿಗಳು ನೀಡಿರುತ್ತಾರೆ. ಆದರೆ ಸದರಿ ರಸ್ತೆಗಾಗಿ ಬಿಟ್ಟಿರುವ ಜಾಗವನ್ನೇ ಅತಿಕ್ರಮಣ ಮಾಡಿಕೊಂಡು ಅಕ್ರಮವಾಗಿ ಕಮರ್ಷಿಯಲ್ ಕಾಂಪ್ಲೆಕ್ಸ್ ನಿರ್ಮಾಣ ಮಾಡಿದ್ದಾರೆ. ಈ ಕಾಂಪ್ಲೆಕ್ಸ್‌ಗಳನ್ನು ನಿರ್ಮಾಣ ಮಾಡುವಾಗ ಸಂಬಂಧಿಸಿದ ಇಲಾಖೆಗಳಿಂದ ಯಾವುದೇ ಪೂರ್ವಾನುಮತಿ ಪಡೆಯದೇ ಕಾಂಪ್ಲೆಕ್ಸ್‌ಗಳನ್ನು ನಿರ್ಮಾಣ ಮಾಡಿದ್ದಾರೆ.
ಈ ಬಗ್ಗೆ ಸಂಘ ಸಂಸ್ಥೆಗಳು, ಆರ್.ಟಿ.ಐ. ಕಾರ್ಯಕರ್ತರು ಹಲವಾರು ಬಾರಿ ಅಹವಾಲುಗಳನ್ನು ನೀಡಿದ್ದರೂ ಸಹ ಯಾವುದೇ ಕ್ರಮಗಳನ್ನು ಕೈಗೊಳ್ಳದೇ ಇರುವುದು ಜನರಲ್ಲಿ ಬೇರೆ ಬೇರೆ ಅನುಮಾನಗಳನ್ನು ಹುಟ್ಟುಹಾಕಿದೆ. ಕಾಂಪ್ಲೆಕ್ಸ್ ಕಟ್ಟಿರುವುದರ ಹಿಂದೆ ಕಾಣದ ಕೈಗಳ, ಪ್ರಭಾವಿಗಳ ಕೈಗಳು ಇರಬಹುದೇ ಎನ್ನುವ ಅನುಮಾನಗಳು ಹುಟ್ಟಿವೆ. ಈ ಕಾಂಪ್ಲೆಕ್ಸ್‌ಗಳು ದೊಡ್ಡ ದೊಡ್ಡ ಬಿಲ್ಡರ್‍ಸ್‌ಗಳಿಗೆ ಸೇರಿರುವುದರಿಂದ ಹಣದ ಆಮಿಷಗಳಿಗೆ ಒಳಗಾಗಿ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ. ಜನಸಾಮಾನ್ಯರೇನಾದರೂ ಈ ರೀತಿ ಮಾಡಿದರೆ ದಿಢೀರನೆ ಕಾಮಗಾರಿಗಳನ್ನು ಸ್ಥಗಿತಗೊಳಿಸುವ ಹಾಗೂ ಸದರಿ ಕಟ್ಟಡಗಳನ್ನು ತೆರವುಗೊಳಿಸುವ ಕ್ರಮ ಕೈಗೊಳ್ಳುವ ಅಧಿಕಾರಿಗಳು ಈ ಕಾರ್ಯಕ್ಕೇಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜನರು ಛೀ ಮಾರಿ ಹಾಕಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿಗಳಿಗೂ ಸಹ ಮನವಿ ಮಾಡಿದ್ದರಿಂದ ಸದರಿ ಕಾಮಗಾರಿಗಳ ಬಗ್ಗೆ ಸ್ಥಳೀಯ ಆಡಳಿತ ಜಿಲ್ಲಾಧಿಕಾರಿಗಳಿಗೆ ಒತ್ತುವರಿಯಾಗಿರುವ ಬಗ್ಗೆ ಸ್ಪಷ್ಟವಾಗಿ ಉಲ್ಲೇಖ ಮಾಡಿ ವರದಿ ನೀಡಿ, ಸದರಿ ಕಮರ್ಷಿಯಲ್ ಕಾಂಪ್ಲೆಕ್ಸ್ ತೆರವುಗೊಳಿಸಲು ಜಿಲ್ಲಾಧಿಕಾರಿಗಳ ಸೂಕ್ತ ನಿರ್ದೇಶನ ನೀಡುವಂತೆ ವರದಿ ಸಲ್ಲಿಸಿದ್ದರೂ ಸಹ ಜಿಲ್ಲಾಧಿಕಾರಿಗಳು ಮಾತ್ರ ಯಾವ ಕ್ರಮ ಕೈಗೊಳ್ಳದೇ ಸುಮ್ಮನಿರುವುದು ಯಾವ ಪುರುಷಾರ್ಥಕ್ಕಾಗಿ? ಎಂಬ ಆರೋಪಗಳು ಕೇಳಿಬರುತ್ತವೆ.
ಕಣ್ಣ ಮುಂದೆ ಕಂಡರೂ ಸಹ ಯಾವುದೇ ಕ್ರಮ ಕೈಗೊಳ್ಳದ ಜಿಲ್ಲಾಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿರುವುದರಿಂದ ಜಿಲ್ಲಾಧಿಕಾರಿಗಳ ಮೇಲೆ ಜನರಿಗೆ ನಂಬಿಕೆಯೇ ಸುಳ್ಳಾಗುತ್ತಿದೆ. ಅಕ್ರಮವಾಗಿ ಕಟ್ಟಿರುವ ಕಮರ್ಷಿಯಲ್ ಕಾಂಪ್ಲೆಕ್ಸ್‌ಗಳನ್ನು ತೆರವುಗೊಳಿಸಲು ಸ್ಥಳೀಯ ಆಡಳಿತಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ಜನರು ಒತ್ತಾಯಿಸಿದ್ದಾರೆ.
ನಮ್ಮನ್ನು follow ಮಾಡಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ