STORY

ಬಿರು ಬಿಸಿಲು, ಬೆಂಕಿಯುಗುಳುವ ಸೂರ್ಯನ ಕಿರಣಗಳು, ಧಗೆಯಿಂದಾಗಿ ಭೂಮಿಯಿಂದ ಏಳುತ್ತಿದ್ದ ಕಾವು ಕಣ್ಣಿಗೆ ಕಟ್ಟಿ ತಲೆ ಸುತ್ತುವಂತಿತ್ತು. ಅನತಿ ಬೇವಿನ ಮರವೇರಿದ್ದ ಬಸ್ರಾಜ ಆಡುಗಳಿಗೆ ಸೊಪ್ಪು ಮುರಿದು ಹಾಕುತ್ತಿದ್ದುದು ಅಸ್ಪಷ್ಟವಾಗಿ ಕಾಣುತ್ತಿತ್ತು. ಈ ತಾಂಡ ಮಾತ್ರ ಎಲ್ಲಿ ಹುಡುಕಿದರೂ ಸಿಗಲೇ ಇಲ್ಲ. ಮನೆಗೆ ಹೋಗಿ ಅಪ್ಪನ ಮುಂದೆ ಏನು ಹೇಳಬೇಕು ಎಂಬ ತಿಳಿಯದ ವೀರಿಗೆ ಮೆತ್ತಗೆ ನಡುಕು ಆರಂಭವಾಗಿತ್ತು.
ತಾಂಡ ಅದೊಂದು ಆಡು, ಪಕ್ಕದ ಬಸರಕೋಡ ತಾಂಡದಿಂದ ತಂದಿದ್ದರಿಂದ ಅದಕ್ಕೆ ತಾಂಡ ಎಂದು ಹೆಸರಿಡಲಾಗಿತ್ತು. ಅದು ಸಾಮಾನ್ಯದ್ದಲ್ಲ. ಕೈಗೆ ಸಿಗದೇ ಗೂಳಿಯಂತೆ ತಪ್ಪಿಸಿಕೊಂಡು ಹೋಗಬಲ್ಲ ಬಲಿಷ್ಠ ಆಡು. ಅನೇಕ ಬಾರಿ ಅದಕ್ಕಾಗಿ ವೀರಿ-ಬಸವರಿಬ್ಬರು ಯಾದಿಯಲ್ಲಿ ಹುಡುಕಾಟ ನಡೆಸಿದರೂ ಚಳ್ಳೆ ಹಣ್ಣು ತಿನ್ನಿಸಿ, ಮರೆಮಾಚಿಕೊಳ್ಳುತ್ತಿತ್ತು. ಈ ಬಾರಿ ಬೆಳಿಗ್ಗೆಯೇ ಕಾಣೆಯಾಗಿದೆ. ಹಗರನೂರು ಹಳ್ಳದ ಕಡೆ ಹೋದಾಗಲ್ಲೆಲ್ಲಾ ತಾಂಡ ಇದೇ ರೀತಿ ಕಣ್ತಪ್ಪಿ ಮರೆಯಾಗುತ್ತಲೇ ಇತ್ತು. ಈ ಬಾರಿ ಸಹ ಇದೇ ಪಾಡು.
ಬೆಳ್ಳಂಬೆಳಿಗ್ಗೆ ಮನೆಯಿಂದ ಹೊರಟಾಗ ಅಲ್ಲಲ್ಲಿ ಪೊದೆಗಳಲ್ಲಿ ಅವಿತುಕೊಳ್ಳುತ್ತಿದ್ದ ಆಡನ್ನು ಹಿಂದಿನಿಂದ ಬಂದ ಬಸ್ರಾಜ ಓಡಿಸಿಕೊಂಡು ಬಂದಿದ್ದ. ಆದರೆ, ಯಾವಾಗ ಹಿರಿಹಳ್ಳ-ಈಚಲ ಕಟ್ಟೆ ಮಧ್ಯದ ಬಂಡಿಜಾಡು ಕಡೆ ಹಿಂಡು ತಿರುಗಿತು ಆಗ ಇಬ್ಬರ ಕಣ್ತಪ್ಪಿಸಿ ಪರಾರಿಯಾಯಿತು. ಹೊತ್ತು ಕಣ್ನೇರಕ್ಕೆ ಇದ್ದಾಗಿನಿಂದಲೂ ಹುಡುಗಾಟ ನಿರಂತರವಾಗಿ ನಡೆಯುತ್ತಲೇ ಇದೆ. ಇದು ಮೂರನೇ ಸರದಿ. ಬಸ್ರಾಜ ಒಂದು ಬಾರಿ, ವೀರಿ ಒಂದು ಬಾರಿ ಹುಡುಕಿದರೂ ಆಡು ಸಿಗಲಿಲ್ಲ.
ಬಿಸಿಲಿನಲ್ಲಿ ಸುತ್ತಾಡಿ ಆಯಾಸಗೊಂಡಿದ್ದ ವೀರಿ ಬಸ್ರಾಜನ ಕಡೆಗೆ ಹೋಗುವ ಬದಲು ಅಲ್ಲಿಯ ಇದ್ದ ಕರಿಜಾಲಿ ಮರದ ಬಡ್ಡೆಗೆ ಒರಗಿಕೊಂಡ. ತಾಂಡದ ಬಗ್ಗೆ ಚಿಂತಿಸುತ್ತಲೇ ಇದ್ದಾಗ ಗೊಡ್ಡಿಯ ನೆನಪಾಯಿತು. ಇದೇ ರೀತಿಯ ಆಡು ಹಿಂಡಿನಲ್ಲಿ ಈ ಹಿಂದೆ ಒಂದಿತ್ತು. ಗೊಡ್ಡಿ ಎಂದು ಹೆಸರಿಡಲಾಗಿದ್ದ ಆ ಕಳಿಗೆ ಸಹ ಇದೇ ರೀತಿ ಆಗಾಗ ತಪ್ಪಿಸಿಕೊಂಡು ಹೋಗುತ್ತಿತ್ತು. ಒಂದೊಮ್ಮೆ ವಾರಗಟ್ಟಲೇ ಜಿಟಿಜಿಟಿ ಮಳೆ ಹಿಡಿದಾಗ ಗೊಡ್ಡಿ ನಡುಹೊತ್ತಲ್ಲೆ ಬಣಕಾರರ ಹೊಲದಲ್ಲಿ ಮಾಯವಾಯಿತು. ಅದನ್ನು ಗುರುತಿಸಿದ ಬಸವರಾಜ ತಕ್ಷಣ ಹುಡುಕಾಟ ಆರಂಭಿಸಿದ. ಆದರೆ, ಎಲ್ಲಿಯೂ ಅದು ಕಣ್ಣಿಗೆ ಬಿದ್ದಿರಲಿಲ್ಲ. ಅದ್ಯಾವುದೋ ಚಂಡ ಮಾರುತ ಎಂಬ ಮಳೆ ಧೋ ಎಂದು ತಿಂಗಳುಗಟ್ಟಲೇ ಸುರಿದ ಕಾಲವದು. ಅದೆಂತಹ ಮಳೆ ಎಂದರೆ ಕೆಂಪು ಮಣ್ಣಿನ ಕಲ್ಲು ಭೂಮಿ ಸಹ ಹುದಲಿನಂತಾಗಿತ್ತು. ಕಾಲಿಟ್ಟರೆ ಅರ್ಧ ಅಡಿ ಕಾಲು ಹೂತುಹೋಗುವಷ್ಟು ಸಡಿಲಗೊಂಡಿತ್ತು ಭೂಮಿ. ಬಹುಷಃ ಕಳಿಗೆ ಎಲ್ಲೂ ಹುದಲಲ್ಲಿ ಸಿಕ್ಕಿಕೊಂಡಿರಬೇಕು. ಹೀಗಾಗಿಯೇ ಅರಚುತ್ತಿದೆ ಎಂದು ವೀರಿ ಅಂದುಕೊಂಡ ಗೊಡ್ಡಿಗಾಗಿ ಹುಡುಕಾಡುತ್ತಿದ್ದ ಬಸ್ರಾಜನನ್ನು ಕರೆದು, ನಾನು ಹುಡುಕುತ್ತೇನೆ. ನೀನು ಹೋಗಬೇಡ ಎಂದು ಹೇಳಿದ್ದ.
ಆಡುಗಳನ್ನು ಕೊನೆಗೆ ಆಳೆತ್ತರವನ್ನೂ ಮೀರಿ ಬೆಳೆದು ನಿಂತಿದ್ದ ಜೋಳದ ಬೆಳೆಯ ಹೊಲಗಳ ಮಧ್ಯದ ಬಂಡಿಜಾಡಿನಿಂದ ಬಯಲು ಪ್ರದೇಶವಿದ್ದ ದುಗ್ಗಮ್ಮನ ಗುಡಿ ಬಳಿ ತಂದು ಗುಡ್ಡೆಹಾಕಿ ಬಸ್ರಾಜನನ್ನು ನೋಡಿಕೊಳ್ಳಲು ಹೇಳಿ ಬಣಕಾರ ಹೊಲವನ್ನು ತಿರುಗಿದೆ. ೫೦ ಎಕರೆ ದಟ್ಟ ಹೈಬ್ರೀಡ್ ಜೋಳದ ಹೊಲದ ಬದುವಿನಿಂದ ಎಷ್ಟು ದೂರ, ಯಾವ ದಿಕ್ಕು ಎಂಬುದು ಮಾತ್ರ ಗೊತ್ತಾಗಿಲಿಲ್ಲ. ತನ್ನದೇ ಅಂದಾಜಿನಲ್ಲಿ ಒಂದು ಕಡೆಯಿಂದ ಹುಡುಕಾಟ ಆರಂಭಿಸಿದ. ಗೊಡ್ಡಿ ಆಗಾಗಲೇ ಅರಚಾಟ ನಿಲ್ಲಿಸಿತ್ತು. ವೀರಿಗಾಗಲೇ ಒಳಗೊಳಗೆ ಭಯ ಆವರಿಸಿತ್ತು. ಆರು ವರ್ಷಗಳ ಅವಽಯಲ್ಲಿ ಒಂದೊಮ್ಮೆಯೂ ತೋಳನ ಬಾಯಿಗೆ ಒಂದು ಮರಿಯನ್ನು ಬಿಟ್ಟವರಲ್ಲ ನಾವು. ಆದರೆ, ಈ ಬಾರಿ ತೋಳನ ಬಾಯಿಗೆ ದಷ್ಟಪುಷ್ಟ ಗೊಡ್ಡಿ ಎಲ್ಲಿ ಬಲಿಯಾಗಿ ಬಿಡುತ್ತಾಳೋ. ಎಲ್ಲಿ ಅಪ್ಪನಿಂದ ಬಾರಕೋಲು ಏಟು ತಿನ್ನಬೇಕಾಗುತ್ತದೆಯೋ ಎಂಬ ಭಯ ಇನ್ನಿಲ್ಲದಂತೆ ಆವರಿಸತೊಡಗಿತು. ಜೊತೆ ಜೊತೆಗೆ ತನಗರಿವಿಲ್ಲದ ಭಯ ಆತನನ್ನು ಆವರಿಸತೊಡಗಿತ್ತು.
ತಿಂಗಳುಗಟ್ಟಲೇ ಮಳೆ ಸುರಿಯುತ್ತಿದುದರಿಂದ ಯಾರೂ ಸಹ ಮನೆಯಿಂದ ಹೊರ ಬರುತ್ತಿರಲಿಲ್ಲ. ಅಗತ್ಯ ಬಿದ್ದಾಗ ಮಾತ್ರ ಹೊರಬಂದು ಮತ್ತೆ ಮನೆ ಸೇರುತ್ತಿದ್ದರು. ಇನ್ನೂ ಕೆಲವರು ಬಿದ್ದ ಮನೆಗಲ್ಲೇ ಬೆಚ್ಚನೆ ಭಾಗ ಹುಡುಕಿ ಉಳಿದ ಮನೆ ಯಾವಾಗ ಬೀಳುತ್ತದೆಯೋ ಎಂಬ ಆತಂಕದಲ್ಲಿ ದಿನ ದೂಡುತ್ತಿದ್ದರು. ಹಾಳಾದ ಮಳೆ ಹಿಡಿದು ತಿಂಗಳಾಯ್ತು ಇನ್ನೂ ಬಿಡುತ್ತಿಲ್ಲ ಎಂದು ಶಪಿಸುತ್ತಲೇ ನಿತ್ಯ ಮಾಡಬೇಕಾದ ಕರ್ಮಗಳನ್ನು ಕೈಗೊಳ್ಳುತ್ತಿದ್ದರು. ಮೊನ್ನೆಯಷ್ಟೇ ಮೂಲೆಮನಿಯ ಪತ್ರೆಮ್ಮ ಟೊಳ್ಳು ಹುಣಸೆಮರದ ಕೆಳಗೆ ತಂಬಿಗೆ ತಗೊಂಡು ಹೋದವಳು ಮರದ ಹರಿ ಬಿದ್ದು ಶಿವನ ಪಾದ ಸೇರಿದ್ದಳು. ಇನ್ನೂ ಏನೇನೋ ಕಾದಿದೆಯೋ ಈ ಯಮರೂಪಿ ಮಳೆಯಿಂದ ಎಂಬ ಭಯ ವೀರಿಯಲ್ಲಿತ್ತು.
**********
ಮಂಡಿವರೆಗೊಂದು ಚಡ್ಡಿ, ಮೈಮೇಲೆ ಹೆಸರಿಗಷ್ಟೇ ಅನ್ನುವಂತಹ ಅಂಗಿ, ತಲೆಯ ಮೇಲೊಂದು ತೊಡ್ಡಿನ ಗೊಪ್ಪೆ ಹೊಂದಿದ್ದ ವೀರಿ ಬಣಕಾರ ಹೊಲ ಜಾಲಾಡುತ್ತಲೇ ಇದ್ದ. ಮೊದಲೇ ನಿರಂತರ ಮಳೆಗೆ ಗೋಣಿ ತಟ್ಟು ತೋಯ್ದು ತೊಪ್ಪೆಯಾಗಿ ಆತನಿಗಿಂತ ಭಾರವಾಗಿತ್ತು. ಅದರಲ್ಲೂ ತನ್ನ ಹುಡುಕಾಟ ಮುಂದುವರಿಸಿದ ವೀರಿಗೆ ಗೊಡ್ಡಿ ತೋಳನ ಬಾಯಿಗೆ ಸಿಕ್ಕು ಆಹಾರವಾಗುತ್ತಿರುವಾಗ ನಾನು ತೋಳನ ಕಣ್ಣಿಗೆ ಬಿದ್ದು, ತೋಳ ನನ್ನನ್ನೂ ಬಲಿ ಪಡೆದರೆ ಎಂಬ ವಿಷಯ ಹೊಳೆಯುತ್ತಲೇ ಕಂಕುಳಲ್ಲಿದ್ದ ಕಂದ್ಲಿ ಕೈಗೆತ್ತಿಕೊಂಡ. ಉದ್ದನೆ ಕಂದ್ಲಿಯನ್ನು ಮೊನ್ನೆಯಷ್ಟೇ ಕುಲುಮೆಗೆ ಒಯ್ದಿದ್ದೆ. ಈಗಂತೂ ಸಣ್ಣ ಒಂದು ಏಟು ಕೊಟ್ಟರೂ ಮರದ ಅರ್ಧ ಅಡಿ ದಪ್ಪದ ಹರಿಗಳು ಕತ್ತರಿಸಿ ತುಂಡಾಗುತ್ತಿದ್ದವು. ಕಂದ್ಲಿಯ ಕೈಲಿಡಿದ ವೀರಿ ನಿಧಾನವಾಗಿ ಒಂದೊಂದೇ ಸಾಲಿನಲ್ಲಿ ತಾಂಡಗಾಗಿ ಹುಡುಕಾಟ ನಡೆಸಿದೆ. ಜೋಳದ ಹೊಲದ ಮಧ್ಯೆ ಇದ್ದ ವೀರಿಗೆ ತಾನೆತ್ತಾ ಸಾಗುತ್ತಿದ್ದೇನೆ ಎಂಬ ಪರಿವೇ ಇಲ್ಲದಂತೆ ರಭಸವಾಗಿ ನಡೆಯ ಒತಡಗಿದೆ. ಎದುರಿಗೆ ಬಂದ ದೊಡ್ಡದೊಡ್ಡ ಜೋಳದ ಗಿಡಗಳನ್ನು ಎರಡೂ ಕೈಗಳಿಂದ ದೂರಮಾಡುತ್ತಾ ಗೊಡ್ಡಿಗಾಗಿ ತಡಕಾಡಿದ. ಆದರೆ, ಗೊಡ್ಡಿ ಕಣ್ಣಿಗೆ ಬೀಳಲೇ ಇಲ್ಲ.
೧೩ ವರ್ಷದ ವೀರಿಗೆ ಅದೆಂತಹ ಧೈರ್ಯ ಬಂದಿತ್ತೆಂದರೆ ಒಂದು ವೇಳೆ ತೋಳನೇ ಎದುರು ಬಂದರೆ ಅದನ್ನು ಕೊಚ್ಚಿ ಹಾಕಿಬಿಡಬೇಕು ಎಂಬಷ್ಟು ದೃಢನಾಗಿದ್ದ. ಕಾಲುಗಳಲ್ಲಿ ಗಟ್ಟಿ ಶಕ್ತಿ ಇಂಬುಗೊಂಡಿತ್ತು. ಒಂದಿಷ್ಟು ನಡುಕುವಿಲ್ಲದೆ ಅವು ಕಾರ್ಯಗತಗೊಂಡಿದ್ದವು. ದೆವ್ವ ಶಕ್ತಿ ಎಂದು ಕರೆಯತ್ತಾರಲ್ಲಾ ಹಾಗೆ ಆತನ ಮೈಯೆಲ್ಲಾ ಹುಬ್ಬಿ ಹೋಗಿತ್ತು. ನಿಧಾನವಾಗಿ ಗೊಡ್ಡಿಯ ಮೇಲಿದ್ದ ಪ್ರೀತಿ ಆತನ ಒಡಲಿಗೆ ಬಂದಿತ್ತು ಎಂದು ಕಾಣಿಸುತ್ತದೆ. ಆತನ ಮುಖದಲ್ಲಿ ಆಕ್ರೋಶ ಮೂಡಿದ್ದರೂ ಕಣ್ಣಾಲಿಗಳ ಬಳಿಯಿದ್ದ ತೊಟ್ಟಿನ ಚೀಲದ ಕೊಪ್ಪಿಯ ನಾರಿನಿಂದ ಮಳೆ ಹನಿ ಸುರಿಯುವಂತೆ ಕಣ್ಣಿನ ನೀರಿನ ಸೆಲೆಯ ಜಿನುಗೊಂದು ಕಾಣಿಸಿಕೊಳ್ಳತೊಡಗಿತು. ಇನ್ನೇನು ಮಾಡಬೇಕು ಎಂಬ ದಾರಿ ಕಾಣದ ವೀರಿ ಅಳಲಾರಂಭಿಸಿದ. ೫೦ ಎಕರೆ ವಿಸ್ತಾರವಾದ ಹೊಲ, ಆಳೆತ್ತವರನ್ನೂ ಮೀರಿಸುವಷ್ಟು ಎತ್ತರ, ಹೂಸಲಂಗಿ ಪೆಳೆಗಿಂತಲೂ ದಟ್ಟವಾಗಿ ಬೆಳೆದುನಿಂತ ಜೋಳದ ಬೆಳೆಯ ಮಧ್ಯೆ ಗಿರಕಿಹೊಡೆದು ಸುಸ್ತಾಗಿದ್ದ ಆತನಿಗೆ ಅನ್ಯ ದಾರಿ ತೋಚಲಿಲ್ಲ. ಹೊಲದ ಒಡ್ಡಿನ ಮೇಲೆ ನಿಸ್ತೇಜನಾಗಿ ನಿಂತುಕೊಂಡ.
ಗೊಡ್ಡಿ ಒದರಿ, ಒದರಿ ಸುಸ್ತಾಗಿರಬೇಕು ಅಂದುಕೊಂಡು ಜೋಳದ ಎರಡು ಎಲೆಗಳನ್ನು ಜೋಡಿಸಿಕೊಂಡು ಮಧ್ಯದಿಂದ ಊದುತ್ತಾ ಪುರ್ ಪುರ್ ಎಂಬ ವಿಚಿತ್ರ ಶಬ್ದಮಾಡುತ್ತಾ ಸಿಳ್ಳೆ ಹೊಡೆಯುತ್ತಾ ಜೋಳದ ಬೆಳೆಯ ಮಧ್ಯೆ ನುಗ್ಗತೊಡಗಿದ. ಕೊನೆಗೆ ದಿಬ್ಬವೇರಿ ನಿಂತುಕೊಂಡು ನೋಡಿದ ಕಾಣಲಿಲ್ಲ. ಹತ್ತಿರವಿದ್ದ ಹುಣಸೆ ಮರ ಏರಲು ಯತ್ನಿಸಿದ ಮಳೆಯಿಂದ ನೆಂದುಹೋಗಿದ್ದ ಮರ ಯಾರನ್ನೂ ಮುಟ್ಟಲು ಬಿಡುವುದಿಲ್ಲ ಎಂಬಂತೆ ವರ್ತಿಸತೊಡಗಿತ್ತು. ಮರದ ವರ್ತನೆಗೆ ನಿರುತ್ತರನಾದ ವೀರಿ ದೂರದಲ್ಲಿ ಬಸ್ರಾಜ ವಿಚಿತ್ರವಾಗಿ ಅರಚುತ್ತಿದ್ದುದು ಕೇಳಿತು. ಮತ್ತೆ ಕಾಲ್ಗಳಿಗೆ ಶಕ್ತಿ ಪಡೆದುಕೊಂಡು ಅಲ್ಲಿಂದ ಓಟಕಿತ್ತ. ಗೊಡ್ಡಿಯ ನಾಪತ್ತೆಯ ಗೋಳು ಆವರಿಸಿದ ಬೆನ್ನಲ್ಲೇ ಬಸ್ರಾಜನ ವಿಚಿತ್ರ ಕೂಗು ವೀರಿಯನ್ನು ಕಂಗಾಲಿಗೆ ತಳ್ಳಿತು. ಮುಳ್ಳು, ಕಲ್ಲು, ದಾರಿ, ದಿಬ್ಬ ಯಾವುದನ್ನು ಲೆಕ್ಕಿಸದೇ ದುಗ್ಗಮ್ಮನ ಗುಡಿಯತ್ತ ಓಟ ಕಿತ್ತ.
***********
ಬಸ್ರಾಜನ ಬಳಿ ಹೋಗುತ್ತಲೇ ಜೂಲು ನಾಯಿಯಂತಿದ್ದ ಒಂದು ಪ್ರಾಣಿ ಗುಂಪಿನ ಕಳಿಗೆಯೊಂದನ್ನು ಜಾಲಿಯ ಪೆಳೆಯೊಳಕ್ಕೆ ಎಳೆದೊಯ್ಯುತ್ತಿರುವುದು ಕಾಣಿಸಿತು. ವೀರಿ ಕೆಳಗಿದ್ದ ದೊಡ್ಡ ದೊಡ್ಡ ಗಾತ್ರ ಕಲ್ಲುಗಳನ್ನು ಕೈಗೆತ್ತಿಗೊಂಡು ಕಳಿಗೆಯನ್ನು ಎಳೆದುಕೊಂಡು ಹೋದ ಪೊದೆಯತ್ತ ಬೀಸಿದ. ಪೊದೆಯ ಒಳಗಿಂದ ಏನೋ ಅಲ್ಲಾಡಿದಂತೆ ಸದ್ದಾಯಿತು. ಪೆದೆಯಲ್ಲಿರುವುದು ತೋಳ ಎಂದು ಊಹಿಸಿಕೊಂಡ. ಅಲ್ಲಿವರೆಗೆ ತೋಳನನ್ನೇ ನೋಡಿರದ ಆತನಿಗೆ ತೋಳ ಎಂದರೆ ನಾಯಿಯಂತಹ ಪ್ರಾಣಿ ಎಂಬ ಧೈರ್ಯ ಬಂತು. ಕೊನೆಗೆ ಪೊದೆಯೊಳಕ್ಕೆ ನುಗ್ಗುವ ಧೈರ್ಯ ಮಾಡಿದ ಕಂಕುಳಲ್ಲಿದ್ದ ಕಂದಿಲನ್ನು ಕೈಯಲ್ಲಿ ಹಿಡಿದು ಜೀಕ್‌ಜಾಲಿಯ ಹರಿಗಳನ್ನು ಕಡಿದುಹಾಕಿದ. ಅತ್ಯಂತ ರಭಸದಿಂದ ಒಳನುಗ್ಗಲು ಯತ್ನಿಸಿದ. ಆದರೆ, ಆತನ ಯತ್ನ ಫಲಿಸಲಿಲ್ಲ. ಆಗಲೇ ಗೊಡ್ಡಿಯನ್ನು ತೋಳ ಪೊದೆಯ ಬಹುದೂರಕ್ಕೆ ಎಳೆದೊಯ್ದಿತ್ತು. ತನ್ನ ತಮ್ಮ ಬಸ್ರಾಜನ ಜೊತೆ ಸೇರಿ ಕೂಗಾಡಿದ, ಅರಚಾಡಿದ, ಅಮ್ಮಲೇ ಅಪ್ಪಲೇ ಎಂದು ಗೋಳಾಡಿ ಅತ್ತು ಕರೆದ. ಆದರೆ, ಗೊಡ್ಡಿ ಮಾತ್ರ ಹೊರಬರಲೇ ಇಲ್ಲ. ಗೊಡ್ಡಿ ತೋಳನ ಆಹಾರವಾಗಿ ಹೋಯಿತು. ತಂದೆ ಬತಾರೆ ಎಂಬ ನೋವಿಗಿಂತ ಗೊಡ್ಡಿಯ ಅಗಲಿಕೆ ಆತನಿಗೆ ಹೆಚ್ಚಿನ ನೋವು ನೀಡತೊಡಗಿತು.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ