Story

ಹರಪನಹಳ್ಳಿಯಿಂದ ಹೊರಟ ಬಸ್ಸು ಮಾಡ್ಲಗೇರಿ ತಾಂಡ, ಕಗ್ಗಲಕಟ್ಟೆ ತಾಂಡದ ಮೇಲೆ ನಮ್ಮೂರಿಗೆ ಬಂದು ನಿಲ್ಲುತ್ತಲೇ ಸಂಜೆ 5.45 ಗಂಟೆಯಾಗಿತ್ತು. ಮಾದರ ಕೇರಿ ದಾಟಿ ನಾವು ವಾಸಮಾಡುತ್ತಿದ್ದ ಮನೆಯ ಹಿಂಭಾಗದಿಂದ, ಆಸ್ಪತ್ರೆ ಮುಂದಾಸಿ ಸೀದಾ ತೇರುಗಡ್ಡಿಯ ಬಳಿ ನಿಂತಾಗ ಬಸ್ಸಿಳಿದೆ. 70 ಕಿಮೀ ದೂರದ ಪಯಣವದು, ಹರಪನಹಳ್ಳಿಯಿಂದ ನಮ್ಮೂರ ರಸ್ತೆ ತೀರಾ ಬಂಡಿಜಾಡಿನಂತಿತ್ತು. ಹೀಗಾಗಿ ಪ್ರಯಾಣದ ಆಯಾಸ ಮುಖದಲ್ಲಿ ಕಾಣುತ್ತಿತ್ತು.
ಕೆಳದಗಿಳಿದವನೇ ಪ್ಯಾಂಟಿನ ಜೇಬಿನಲ್ಲಿದ್ದ ಬಾಚಾಣಿಕೆ ತೆಗೆದು ತಲೆ ಬಾಚಿಕೊಂಡು ನನ್ನೆದುರಿಗಿದ್ದ ಬೇವಿನ ಮರದ ಕಟ್ಟೆ ನೋಡಿದೆ. ರೈತಾಪಿ ಜನರೇ ಹೆಚ್ಚಾಗಿದ್ದ ಆ ಊರಿನಲ್ಲಿ ಸಂಜೆಯಾಗುತ್ತಲೇ ಹೊಲಗಳಿಂದ ಬಂದವರು ಕಟ್ಟೆ ಮೇಲೆ ಕುಳಿತು ಹರಟುವುದು ಸಹಜ. ಅಲ್ಲಿ ಎಲ್ಲಾ ರೀತಿಯ ಹರಟೆ ಇರುತ್ತದೆ. ಊರು, ರಾಜ್ಯ, ದೇಶ, ವಿದೇಶಗಳ ಬಗ್ಗೆ ಚಚೆ೯ಗಳು ಕಟ್ಟೆಯ ಮೇಲೆ ನಡೆಯುತ್ತವೆ. ಅಂತಹ ಚಚೆ೯ಯಲ್ಲಿ ಮಗ್ನರಾಗಿದ್ದ ಸುಮಾರು 50 ವಷ೯ದ ವ್ಯಕ್ತಿಯೋವ೯ ನನ್ನಡೆಗೆ ಬಂದ. ಹೆಗಲ ಮೇಲೆ ಟವೆಲ್್, ಕೈಯಲ್ಲಿ ಬೀಡಿ, ತುಂಬು ತೋಳಿನ ಬನಿಯನ್ ಮಧ್ಯಭಾಗದಲ್ಲೊಂದು ಜೇಬಿದೆ. ಆ ಜೇಬಿನಲ್ಲಿ ಮೊಬೈಲ್್ ಕಾಣುತ್ತಿತ್ತು.
ನನ್ನ ಬಳಿ ಬರುತ್ತಲೇ "ಆರಾಮ ಗೌಡ್ರೆ? ಬಾಳ ದಿಸ ಆದ್ಮೇಲೆ ಊರಿನ ಕಡೆ ಮುಖ ಮಾಡಿದ್ದೀರಿ. ಮಸಲಾಡದ ಈರಣ್ಣ ಈಗಲಾದರೂ ನಿಮ್ಮನ್ನು ಕರೆಸ್ಕಂಡನಲ್ಲ" ಎನ್ನುತ್ತಾ ನನ್ನ ಕೈಲಿದ್ದ ಬ್ಯಾಗನ್ನು ಕೈಗೆತ್ತಿಕೊಂಡ. ಆತನ ನಡತೆ, ಮಾತು ಕೇಳಿದ ಮೇಲೆ ಆತ ಹನುಮಂತಪ್ಪ ಎಂದು ತಿಳಿತು. ನಮ್ಮ ಮನೆಯಲ್ಲಿ ಕಮ್ತ ಮಾಡುತ್ತಾ ಜೀವನ ಸಾಗಿಸುತ್ತಿದ್ದ ಆತನಿಗೆ ನಮ್ಮ ಕುಟಂಬ ಎಂದರೆ ಪರಮಾಪ್ತ.
ಮನೆಯಲ್ಲಿ ಏನೇ ನಡೆದ್ರು ಹೊರಗಿ ಪೂರಾ ಜವಾಬ್ದಾರಿ ಆತನದ್ದೇ.
ಅಲ್ಲಿಂದ ಮನೆ ಕಡೆ ನಿಧಾನವಾಗಿ ಹೆಜ್ಜೆ ಹಾಕುತ್ತಾ ಹೋದೆ. ಬೇವಿನ ಕಟ್ಟೆ ಮೇಲೆ ಕುಳಿತ ಕೆಲವರು ನನ್ನನ್ನು ಗುರುತಿಸಿ ಏನ್್ ಗೌಡ, ಗೌಡ್ರೆ, ಗೌಡಪ್ಪ, ಬೀಗ ಎಂದೆಲ್ಲಾ ಸಂಬೋಧಿಸಿ ಯೋಗಕ್ಷೇಮ ವಿಚಾರಿಸಿದರು. ಆ ಪೈಕಿ ಒಬ್ಬಾತ, "ಏನಪ್ಪಾ ಈಗ ಬರಂಗಾಯಿತಾ ನಿನಗೆ? ನಿನಗೇನು ತಂದೆ-ತಾಯಿ, ಊರು-ಕೇರಿ, ಮನೆತನ-ಘನತೆ ಬಗ್ಗೆ ಯಾವ ದರದ್ದು ಇದ್ಹಂಗಿಲ್ಲ. ಸಿಟಿ ಸೇರಿದ ಮ್ಯಾಲೆ ಎಲ್ಲಾ ಮರೆತು ಹಾಯಾಗಿದ್ದೈಂಗತೆ?" ಎಂದು ಖಾರವಾಗಿ ಕೇಳಿದ.
ಅವರಿಗೆ ಮುಖ ಕೊಟ್ಟು ಮಾತನಾಡುವಷ್ಟು ತಾಳ್ಮೆಯಾಗಲಿ ನನಗಿರಲಿಲ್ಲ. ಅಷ್ಟೇ ಅಲ್ಲದೆ, ನಾನು ಹೇಳಿದ್ದನ್ನು ಅವರು ಅಥ೯ಮಾಡಿಕೊಳ್ಳುತ್ತಾರೆ ಎಂತಲೂ ಸಹ ನನಗೆ ನಂಬಿಕೆಯಿರಲಿಲ್ಲ. ಅಲ್ಲಿಂದ ಹನುಮಂತಪ್ಪನ ಬೆನ್ನು ಹತ್ತಿ ಮನೆ ಕಡೆ ನಡೆದೆ. ಮನದಲ್ಲಿ ಏನೋ ಕಳವಳ. ಮನೆ ಹತ್ತಿರವಾದಂತೆಲ್ಲಾ ಮನಸ್ಸಿಗೆ ಕಸಿವಿಸಿ. ತಂದೆ ಚೆನ್ನಾಗಿದ್ದಾಗ ಬರಬೇಕಾಗಿದ್ದವ ಇಂದು ಹಾಸಿಗೆ ಹಿಡಿದು ದಿನ ಎಣಿಸುವಾಗ ಬಂದಿದ್ದಾನೆ ಎಂದು ಜನರು ಆಡಿಕೊಳ್ಳುತ್ತಾರೇನೋ ಎಂಬ ಆತಂಕ.
ಏನೇ ಆಗಲಿ, ಇಲ್ಲಿಗೆ ಬಂದ ಮೇಲೆ ಮನೆಗೆ ಹೋಗಲೇ ಬೇಕಾದುದು ಅನಿವಾಯ೯ ಎಂದು ನಿಧ೯ರಿಸಿ, ನೆಲದೆಡೆ ಮುಖಮಾಡಿಕೊಂಡು ಭರ ಭರನೇ ಓಡತೊಡಗಿದೆ. ರಸ್ತೆ ಪಕ್ಕದ ಮನೆ ಮುಂದೆ ನಿಂತಿದ್ದ ಅನೇಕ ಪರಿಚಿತ ಮುಖಗಳನ್ನು ಹಾಗೆ ವಾರೆಗಣ್ಣಿನಿಂದ ನೋಡುತ್ತಾ, ಅವರ ಕಣ್ಣುಗಳಲ್ಲಿದ್ದ ಭಾವನೆಯನ್ನು ನೋಡುತ್ತಾ ಸಾಗಿದೆ. ಓಣಿಯ ಆರಂಭಕ್ಕೆ ಬರುತ್ತಲೇ ಕಾಲುಗಳಲ್ಲಿ ಒಂದು ರೀತಿಯ ನಡುಕು ಆರಂಭವಾಯಿತು. ಒಂದು ವೇಳೆ ಚಲನೆ ನಿಲ್ಲಿಸಿದರೆ, ಕುಸಿದು ಬಿಡುತ್ತೇನೆ ಎಂಬ ಭಯ ಆವರಿಸಿತು. ಕಾಲುಗಳನ್ನು ಬಲವಂತವಾಗಿ ಮುನ್ನಡೆಯುತ್ತಾ ನನ್ನ ಜನ್ಮಸ್ಥಳದತ್ತ ನೋಡಿದೆ.
ಏನೆಂದರೆ ಏನೂ ಬದಲಾಗಿಲ್ಲ. ಮನೆಯ ಮುಂದಿನ ಚಪ್ಪರ ಹಾಗೆ ಇದೆ. ಹಿಂದೆ ಇದ್ದ ರೀತಿಯಲ್ಲಿಯೇ ಮನೆ ಗೋಡೆಗೆ ಸಗಣಿ ಬಳಿಯಲಾಗಿತ್ತು. ಮನೆ ಮುಂದಿನ ಕಟ್ಟೆಯ ಮೇಲೆ ಯಾರೋ ಮಲಗಿದ್ದರು. ಹಾಸಿಗೆ ನೋಡಿದಾಗ ಬಹುದಿನಗಳಿಂದ ಅವರು ಅಲ್ಲೇ ಮಲಗಿದ್ದಾರೆ ಎನ್ನುವುದು ಗೊತ್ತಾಗುತ್ತಿತ್ತು. ಹತ್ತಿರ ಹೋದಂತೆ ಅದು ನನ್ನ ತಂದೆ ಅಂತ ತಿಳಿದುಬಂತು. ಮನೆ ಬಿಟ್ಟು ಹೋಗಿ ಸುಮಾರು 12 ವಷ೯ದ ನಂತರ ಊರಿನ ಕಡೆ ಮುಖ ಮಾಡಿರಲಿಲ್ಲ.
ಇದೀಗ ತಂದೆ ತೀರಾ ಹಾಸಿಗೆ ಹಿಡಿದಿದ್ದಾರೆ ಎಂಬ ವಿಷಯ ತಿಳಿದು ಊರಿಗೆ ಬಂದಿದ್ದೇನೆ. ಮನಸ್ಸು ತಡೆಯದೆ ಅನೇಕ ಸಾರಿ ಊರಿಗೆ ವಾಪಾಸ್ಸಾಗಬೇಕು ಎಂಬ ಮನಸ್ಸೇನೋ ಬಂದಿದ್ದು ನಿಜ. ಆದರೆ, ಊರಲ್ಲಿ ಮಾಡುವುದೇನು? ಬದುಕು ಕಟ್ಟಿಕೊಳ್ಳುವುದು ಹೇಗೆ? ಎಂಬ ಹಲವು ಉತ್ತರಿಸಲಾಗದ ಪ್ರಶ್ನೆಗಳು ಆಗಿಂದಾಗ್ಗೆ ನನ್ನನ್ನು ಕಾಡಿದ್ದಂತೂ ಸುಳ್ಳಲ್ಲ. ಇದರ ಜೊತೆಗೆ ಊರಲ್ಲಿ ನಮಗಿರುವ ಗೌರವ ಅಷ್ಟಕಷ್ಟೆ. ಧ್ವೇಷ, ಅಸೂಯೆ, ಪರಸ್ಪರ ಬಡಿದಾಡುವ ಜನರ ಮಧ್ಯೆ ನೆಮ್ಮದಿ ಜೀವನ ಕಂಡುಕೊಳ್ಳುವುದು ಕಷ್ಟ ಎಂಬ ಒಂದು ಕಾರಣವೂ ನಾನು ಹಳ್ಳಿಗೆ ಹೋಗುವುದನ್ನು ತಡೆದಿತ್ತು.
ಮನೆ ಮುಂದಿನ ಅಂಗಳ, ಅದರ ಮೂಲೆಯಲ್ಲಿ ತಿಪ್ಪೆ, ಪಕ್ಕದಲ್ಲೇ ನಾನೇ ನೆಟ್ಟು ಹೋಗಿದ್ದ ಕಣಗಿಲೆ ಹೂವಿನ ಗಿಡ ಭಾರೀ ಎತ್ತರಕ್ಕೆ ಬೆಳೆದು ಹೂ ತುಂಬಿಕೊಂಡು ಮಿರುಗುತ್ತಿತ್ತು. ನನ್ನನ್ನು ಸ್ವಾಗಿತಿಸಲೋ ಎಂಬಂತೆ ಆಗಿಂದಾಗ್ಗೆ ನನ್ನ ಬುಜಗಳನ್ನು ಮುತ್ತಿಕ್ಕಿತ್ತಿತ್ತು. ವಾಸ್ತವದ ನಿಜ ಚಿತ್ರಣವನ್ನೇ ಮರೆತ ನನಗೆ ಮನೆಯ ಮುಂದಿನ ಅಂಗಳ, ತಿಪ್ಪೆ, ಹೂ ಗಿಡ, ಕಟ್ಟೆ, ಕಟ್ಟೆಗೆ ಕಟ್ಟಿದ್ದ ಚಪ್ಪರ ಎಲ್ಲವನ್ನು ಕಣ್ತುಂಬಿಸಿಕೊಳ್ಳುವ ತವಕ ಸೇರಿಕೊಂಡಿತ್ತು. ಈ ಮಧ್ಯೆ ಹನುಮಂತಪ್ಪ, "ಗೌಡ್ರೇ ವೀರಣ್ಣ ಬಂದಾನೆ ಎದ್ದೇಳ್ರಿ.. ದಾವಣಗೆರೆಯಿಂದ ನಿಮ್ಮನ್ನು ನೋಡಾಕ ಬಂದಾನ ಏಳ್ರಿ'' ಅಂದ ಆದ್ರೆ ಗೌಡ್ರು ಗಾಢ ನಿದ್ರೆಯಲ್ಲಿದ್ರು ಅನ್ನಿಸುತ್ತೆ ಮಿಸುಗಾಡಲಿಲ್ಲ.
ಅಷ್ಟರಲ್ಲೇ ಮನೆಯೊಳಗಿದ್ದ ನನ್ನ ಮಲತಾಯಿ ಹೊರ ಬಂದ್ರು. ಹನುಮಂತಪ್ಪ, "ಅವ್ವ ಗೌಡ್ರ ಕಾಲಿಗೆ ನೀರು ಕೊಡಿ" ಎಂದ. ಮರು ಮಾತನಾಡದೆ, ನಿಲಿ೯ಪ್ತ ಮುಖ ಹೊತ್ತ ನನ್ನ ಸಾಕು ತಾಯಿ ಈರವ್ವ ಮನೆಯೊಳಗೆ ಹೋದರು. ನಾನು ಬಂದ ವಿಚಾರ ತಿಳಿದಿದ್ದಕ್ಕೂ ಏನೋ, ನನ್ನ ತಮ್ಮ ಮಲ್ಲನಗೌಡ ಹೊರಬಂದು. "ಯಾವಾಗ ಬಂದೆ?" ಎಂದು ತುಸು ಒರಟಾಗಿ ಕೇಳಿದ. ನಾನು ಈಗ ಎಂದು ಅವ್ವನ ಕೈಲಿನ ಚಂಬು ಇಸ್ಕೊಂಡು ಕೈ, ಕಾಲು, ಮುಖ ತೊಳೆದುಕೊಂಡು ಮತ್ತೆ ಕಟ್ಟೆಯೇರಿ ಕುಳಿತೆ.
ಹೊತ್ತಿಳಿದು ಕತ್ತಲಾದರೂ ಯಾರೊಬ್ಬರೂ ನನ್ನ ಬಗ್ಗೆ ವಿಶೇಷ ಪ್ರೀತಿಯನ್ನಾಗಲಿ, ಆದರವನ್ನಾಗಲಿ ತೋರಿಸಲಿಲ್ಲ. ಹೀಗೆ ಲೋಕಾರೂಢಿ ಮಾತುಗಳು ಬಿಟ್ಟರೆ, ಏನನ್ನೂ ಕೇಳಲಿಲ್ಲ. ನಾನು ಏನು ಮಾಡುತ್ತಿದ್ದೇನೆ ಎಂಬುದನ್ನು ಸಹ ಕೇಳಲಿಲ್ಲ. ಅದು ನನ್ನ ತಮ್ಮ ಮಲ್ಲನಗೌಡನಿಗೆ ಗೊತ್ತಿಲ್ಲದ ವಿಚಾರವೇನೋ ಸರಿ. ನನ್ನನ್ನ ಸಾಕಿ ಸಲುಹಿದ ತಾಯಿಗೆ ತೀರಾ ನಗರ ಜೀವನದ ಶೈಲಿ ಅಥ೯ ಆಗದೇ ಇದ್ದರೂ ಸಹ ನನ್ನ ಕುಶಲವನ್ನಾದರೂ ಕೊಂಚ ಪ್ರೀತಿಯಿಂದ ಕೇಳ ಬಹುದಿತ್ತೇನೋ ಎನ್ನಿಸಿತು.
ಅವರ ಹೊಟ್ಟೆಯಲ್ಲಿ ಹುಟ್ಟದಿದ್ದರೇನಂತೆ ತೀರಾ 3 ತಿಂಗಳ ಮಗುವಿದ್ದಾಗಿನಿಂದ 18ವಷ೯ದವರೆಗೆ ಅವರ ನೆರಳಲ್ಲಿ ಬದುಕಿದ್ದೇನೆ. ಹೊಡೆಸಿಕೊಂಡು, ಬರೆ ಹಾಕಿಸಿಕೊಂಡು, ತಾರತಮ್ಯ ಸಹಿಸಿಕೊಂಡು ಬದುಕಿದ್ದೇನೆ. ಆದರೂ, ಒಮ್ಮೊಮ್ಮೆ ಗೌಡ್ರು ಹೊಡೆಯಲು ಬಂದಾಗ ತಾನು ಏಟು ತಿಂದು ನನ್ನನ್ನು ರಕ್ಷಿಸಿದ್ದಾರೆ. ಇದರಥ೯ ಅವರಿಗೆ ಒಂದು ಕಿಚ್ಚಾದರೂ ನನ್ನ ಬಗ್ಗೆ ಪ್ರೀತಿ ಇದೆ ಎಂದೇ ನಾನು ಭಾವಿಸಿದ್ದೆ. ಎಷ್ಟೋ ಸಾರಿ ದಾವಣಗೆರೆಯಲ್ಲಿ ಊಟಕ್ಕಿಲ್ಲದಾಗ ಅವಕ ಮುಖ ನೆನೆಪಿಸಿಕೊಳ್ಳುತ್ತಿದ್ದೆ. ಅಂತಹವರಿಗೆ ನಾನು ಬೇಡವಾದೆನಾ? ಎನ್ನಸಿತು.
18 ವಷ೯ದ ಅರೆಬರೆ ಬುದ್ದಿವಂತಿಕೆಯಲ್ಲಿ ರಾತ್ರೋರಾತ್ರಿ ಗೌಡರೊಂದಿಗೆ ಜಗಳವಾಡಿಕೊಂಡು ಇದ್ದ ಎರಡು ಪಂಚೆ, ಬನಿಯನ್್, ಅಂಗಿಯೊಂದಿಗೆ ಮನೆ ಬಿಟ್ಟು ಹೊರಟಾಗ ಪರಿಪರಿಯಾಗಿ ಅತ್ತು ಹೋಗದಂತೆ ತಡೆದ ನನ್ನ ತಾಯಿಗೆ ನಾನು ಬೇಡವಾದೆನಾ? ಗೌಡ್ರು ಮಗನೇ ನೀನು ಹೊಸಲಿಂದಾಚೆ ಕಾಲಿಟ್ಟಿದ್ದೇ ಆದರೆ, ಇನ್ನು ಮುಂದೆ ನನ್ನ ನಿನ್ನ ಸಂಬಂಧ ಮುರಿದಂತೆಯೇ ತಿಳಿದುಕೋ ಎಂದು ಎಚ್ಚರಿಕೆ ನೀಡಿದಾಗ. ನೀಡು ಮಾಡಿಟ್ಟು ನೂರಾರು ಎಕರೆ ಆಸ್ತಿಯ ಒಂದು ಅಂಗುಲ ಜಾಗ ಸಹ ನನಗೆ ಬೇಡ ಎಂದು ಹೊರಬಿದ್ದಿದ್ದೆ.
ಅಷ್ಟು ತ್ಯಾಗ ಮಾಡಿದ ನನ್ನ ಬಗ್ಗೆ ಒಂದಷ್ಟು ಮಮತೆ ಬೇಡವೆ? ನನ್ನ ಸ್ವಂತ ತಾಯಿ ಇದ್ದು ಹೀಗೆ ನಾನು ಮನೆ ಬಿಟ್ಟು ಇಷ್ಟು ವಷ೯ದ ನಂತರ ವಾಪಾಸ್ಸು ಬಂದಿದ್ದರೆ, ಇಂಥ ಸಮಸ್ಯೆ ಎದುರಾಗುತ್ತಿತ್ತೆ? ಎಂಬ ಪ್ರಶ್ನೆಯೊಂದಿಗೆ ನಿದ್ರೆ ಬಾರದೆ ಬಹುಹೊತ್ತು ಹಾಸಿಗೆಯಲ್ಲಿಯೇ ಹೊರಳಾಡಿದೆ. ಏನೆಂದರೂ ನಿದ್ರೆ ಬಾರದು. ಬಹು ಹೊತ್ತಿನ ಬಳಿಕೆ ಸಮಯ ಎಷ್ಟೆಂದು ದಿಂಬಿನ ಪಕ್ಕದಲ್ಲಿಟ್ಟಿದ್ದ ಮೊಬೈಲ್್ ಮೇಲೆ ಕಣ್ಣು ಹಾಯಿಸಿದೆ. ಆಗಲೇ 2 ಗಂಟೆಯಾಗಿತ್ತು.
ನನ್ನದೇ ಯೋಚನೆ ಬಲೆಗೆ ಸಿಕ್ಕಿಕೊಂಡು ಬಹಳ ಹೊತ್ತು ಹಾಸಿಗೆ ಮೇಲೆ ಹೊರಳಾಡಿದ ನಂತರ ಗೌಡ್ರು ಕೆಮ್ಮಿದರು. ನಿಧಾನವಾಗಿ ಹಾಸಿಗೆಯಿಂದ ಎದ್ದು, ನನ್ನತ್ತ ನೋಡಿದರು. ಹುಣ್ಣಿಮೆಗೆ 10 ದಿನ ಬಾಕಿಯಿದ್ದ ಕಾರಣ ಕೊಂಚ ಬೆಳದಿಂಗಳಲ್ಲಿ ಅವರ ಹಾವ ಭಾವ ಚೆನ್ನಾಗಿಯೇ ಕಾಣುತ್ತಿತ್ತು. ಎದ್ದವರೆ ನನ್ನತ್ತ ನೋಡಿದರು. ಗಾಬರಿ, ಗೊಂದಲ, ಸಂಕೋಚ, ನಾಚಿಕೆ ಎಲ್ಲವೂ ನನ್ನ ಮುಖದಲ್ಲಿ ಒಂದೇ ಬಾರಿಗೆ ಮೂಡಿದವು. ಅವರ ಜೊತೆ ನಾನೀಗ ಹೇಗೆ ವತಿ೯ಸಬೇಕು. ಅವರಲ್ಲಿ ನನ್ನ ಬಗ್ಗೆ ಯಾವ ರೀತಿಯ ಮನೋಬಾವವಿದೆ ಎಂದು ಎಲ್ಲದಕ್ಕೂ ಕಾರಣವಾಗಿತ್ತು.
ನನ್ನತ್ತ ನೋಡಿದ ಅವರು, ಕೈ ಸನ್ನೆಯಿಂದ ಹತ್ತಿರ ಬರುವಂತೆ ಸೂಚಿಸಿದರು. ವಯಸ್ಸಾಗಿದೆ ಹಾಗಾಗಿ ಅವರಿಗೆ ಸರಿಯಾಗಿ ಕಣ್ಣು ಕಾಣುತ್ತಿಲ್ಲ ಮಲ್ಲನಗೌಡ ಎಂದುಕೊಂಡು ನನ್ನನ್ನು ಹತ್ತಿರ ಕರೆಯುತ್ತಿದ್ದಾರೆ ಎಂದುಕೊಂಡ ನಾನು ಅವರ ಬಳಿ ಹೋಗದೆ, ನನ್ನ ಹಿಂದೆ ಯಾರಾದರೂ ಇದ್ದಾರೋ ಎಂಬುದನ್ನು ನೋಡಿದೆ. ಯಾರೂ ಇರಲಿಲ್ಲ. ಮತ್ತೆ ಅವರು ನನ್ನೆಡೆ ನೋಡಿ ಕೈ ಸನ್ನೆ ಮಾಡಿದರು. ಹೇಗೋ ಧೈಯ೯ಮಾಡಿ ಅವರತ್ತ ನಾನು ಸಾಗಿದೆ. ತಕ್ಷಣ ನನ್ನನ್ನು ಬಿಗಿಯಾಗಿ ಅಪ್ಪಿಕೊಂಡ ಅವರು ಮೆಲುಧ್ವನಿಯಲ್ಲಿ ಅಳುತ್ತಿದ್ದರು.
ನನ್ನ ಭುಜದ ಮೇಲೆ ತಲೆಯಿಟ್ಟಿದ್ದ ಅವರ ಕಣ್ಣುಗಳು ಒದ್ದೆಯಾಗಿದ್ದು ನನ್ನ ಅನುಭವಕ್ಕೆ ಬಂತು. ಯಾಕೆ ಎಂದು ನನಗೇನೂ ತಿಳಿಯಲಿಲ್ಲ. ನನಗೆ ಗೊತ್ತಿಲ್ಲದಂತೆ ನನ್ನಲ್ಲೂ ದುಖಃ ಉಮ್ಮಳಿಸಿ ಬಂತು. ಕಣ್ಣಾಲಿಗಳು ತುಂಬಿಬಂದವು. ಇಡೀ ಜಗತ್ತು ನಿದ್ರಾ ದೇವತೆಯಲ್ಲಿ ಲೀನವಾಗಿತ್ತು. ನಮ್ಮೂರು ಸಣ್ಣಹಳ್ಳಿಯಾಗಿದ್ದರಿಂದ ಏನಂದರೇ ಏನು ಸದ್ದಿಲ್ಲ. ದೂರದಲ್ಲಿ ನರಿಗಳು ಉಯಿಲುಡಿತ್ತಿದ್ದು ಕೇಳಿಸಿತ್ತಿತ್ತು. ಜನ್ಮದಾತರು ಗಟ್ಟಿ ಆಲಿಂಗನ, ಅಳು ಬಿಟ್ಟರೆ ಮಾತನಾಡುತ್ತಿಲ್ಲ. ಸಂಪೂಣ೯ ನಿಶ್ಯಬ್ಧದಲ್ಲಿ ನಮ್ಮ ಸಣ್ಣ ಧ್ವನಿ ಸಹ ದುಖಃ ಭರಿತ ಉಸಿರಾಟಕ್ಕೆ ಮಲ್ಲನಗೌಡ ಎಚ್ಚರಗೊಂಡ!
ಮಲ್ಲನಗೌಡ ನಿಧನವಾಗಿ ಅಂಬೆಗಾಲಿಡುತ್ತಲೇ ನಮ್ಮ ಬಳಿ ಬಂದ. ಮಲ್ಲನಗೌಡ ಬಂದ ಕೂಡಲೇ ಗೌಡ್ರು ನನ್ನನ್ನು ಬಿಟ್ಟು ಅವನತ್ತ ದೖಷ್ಟಿ ನೆಟ್ಟರು. ನಾವಿಬ್ಬರೂ ಅಳುತ್ತಿದ್ದನ್ನು ಕಂಡ ಮಲ್ಲನಗೌಡ ಇದ್ದಕ್ಕಿದ್ದಂತೆ ನನ್ನನ್ನು ಬಾಚಿ ತಬ್ಬಿಕೊಂಡ. ಒಂದು ಕಡೆ ನನ್ನ ತಂದೆ ಇನ್ನೊಂದೆಡೆ ನನ್ನ ತಮ್ಮ ಹೀಗೆ ಮೂವರು ಪರಸ್ಪರ ತಬ್ಬಿಕೊಂಡು ಮೌನದೇ ರೋಧಿಸಿದೆವು. ಯಾಕೆ? ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿತ್ತು. ಸಂಜೆಯಿಂದ ಮನೆಯಲ್ಲಿದ್ದ ನನ್ನ ಇಹ ತಂದೆಗೆ ಅಥ೯ವಾಗಿತ್ತು. ಆದರೂ, ಯಾಕೆ ಹೀಗೆ ಮಾಡಿದರು ಎಂಬ ಯೋಚನೆ ಬಂತು.
ಭವಿಷ್ಯ ಗೌಡ್ರು ನನ್ನೊಂದಿಗೆ ಮಾತನಾಡುವುದು ನನ್ನ ಅವ್ವನಿಗೆ ಇಷ್ಟವಿಲ್ಲದಿರಬೇಕು. ಹಾಗಾಗಿಯೇ ಈ ರೀತಿ ಮಧ್ಯರಾತ್ರಿಯಲ್ಲಿ ನನ್ನ ಮೇಲೆ ಪ್ರೀತಿ ತೋರುತ್ತಿದ್ದಾರೆ ಎಂದೆನ್ನಿಸಿತು. ಆದರೆ, ನನ್ನ ತಮ್ಮ ಮಲ್ಲನಗೌಡ ಹೀಗೆ ಮಾಡುತ್ತಿರುವುದೇಕೆ? ಅವನಿಗಾವ ಭಿಡೆ ಇದ್ದಾತು. ಹಾಗೆ ತಾಯಿ ಮುಂದೆ ಭಿಡೆ ಇದ್ದದ್ದೇ ಆದರೆ, ನಾನು ಬಹಿದೆ೯ಸೆಗೆ ಹೋದಾಗಲಾದರೂ ನನ್ನ ಹಿಂದೆ ಮಾತನಾಡಬಹುದಿತ್ತಲ್ಲ? ಅವನೇಕೆ ಮಾತನಾಡಿಸಲಿಲ್ಲ? ಎಂಬ ಪ್ರಶ್ನೆ ಮೂಡಿದವು. ಅಲ್ಲಿಯವರೆಗೆ ನಾವು ಮೌನವಾಗಿಯೇ ಇದ್ದೆವು. ಆಲಿಂಗನ ಮುಗಿದ ನಂತರ ಕಣ್ಣೊರೆಸಿಕೊಂಡು ಪರಸ್ಪರ ಮುಖ ನೋಡಿಕೊಂಡೆವು.
ಗೌಡ್ರಿಗೆ ಏನು ತೋಚಿತೋ ಗೊತ್ತಿಲ್ಲ ಇದ್ದಕಿದ್ದಂತೆ ಮತ್ತೆ ಬುರುಕಿ ಹಾಕಿಕೊಂಡು ಮಲಗಿಬಿಟ್ಟರು. ತಂದೆ ಮಲಗಿದ ನಂತರ ಮಲ್ಲನಗೌಡ ನಿಧಾನವಾಗಿ ತನ್ನ ಹಾಸಿಗೆ ಸೇರಿದ. ಇಷ್ಟೆಲ್ಲಾ ನಡೆದು ಒಂದು ಮಾತನ್ನೂ ಆಡದ ಗೌಡರು ಬುರುಕಿ ಹಾಕಿಕೊಂಡು ಮಲಗಿದ್ದು, ನನ್ನನ್ನು ಗೊಂದಲದ ಕೂಪಕ್ಕೆ ತಳ್ಳಿದವು. ಗೌಡ್ರಿಗೆ ನನ್ನ ಮೇಲೆ ಅಪಾರವಾದ ಪ್ರೀತಿಯಿದೆ. ಹೀಗಾಗಿಯೇ ಅವರು ನನ್ನನ್ನು ತಬ್ಬಿಕೊಂಡು ಕಣ್ಣೀರಿಟ್ಟರು. ಮಲ್ಲನಗೌಡಿನಿಗೂ ಅಷ್ಟೆ, ಆದರೆ, ಅವ್ವನ ಭಯಕ್ಕೆ ಇಬ್ಬರೂ ನನ್ನನ್ನು ಹಗಲಲ್ಲಿ ಸರಿಯಾಗಿ ಮಾತನಾಡಿಸಿರಲಿಲ್ಲ ಎಂದು ಕಾಣುತ್ತದೆ ಎಂಬ ಒಂದು ನಿಧಾ೯ರಕ್ಕೆ ಬಂದೆ.
ದೂರದ ಊರಿನಲ್ಲೆಲ್ಲೋ ಅಷ್ಟೇನು ಅರಿಯದ ಜನರ ಜೊತೆ ಇರುವುದಕ್ಕಿಂತ ನಾನು ನನ್ನ ಊರಲ್ಲೇ ಏನಾದರೂ ಒಂದು ಮಾಡಬೇಕು. ಈ ಕುರಿತು ಬೆಳಿಗ್ಗೆ ಗೌಡ್ರ ಜೊತೆ ಮಾತನಾಡಬೇಕು. ಅವ್ವನ ಮನವೊಲಿಸಬೇಕು. ಒಂದು ವೇಳೆ ಅವ್ವ ಅಡ್ಡಗಾಲು ಹಾಕಿದರೆ, ಎಲ್ಲಾ ಆಸ್ತಿಯನ್ನು ನಾನು ಮಲ್ಲನಗೌಡನ ಹೆಸರಿಗೆ ಬರೆಯುತ್ತೇನೆ. ನೀನು ಮಾತ್ರ ನನ್ನನ್ನು ಇಲ್ಲಿಯೇ ಇರಲು ಬಿಡಬೇಕು ಎಂದು ಬೇಡಿಕೊಳ್ಳೋಣ ಎಂದು ಯೋಚಿಸಿದೆ. ಇದ್ದ ಊರಲ್ಲೇ ಏನಾದರೊಂದು ಸಾಧನೆ ಮಾಡೋಣ. ಹೂವಿನ ಹಡಗಗಲಿಯಲ್ಲೊಂದು ಸಣ್ಣ ವ್ಯಾಪಾರ ಮಾಡೋಣ ಕೈಗೊಂದು ಗಾಡಿಕೊಂಡರೆ ದಿನಂಪ್ರತಿ ಓಡಾಡಲು ಸಮಸ್ಯೆಯಾಗುವುದಿಲ್ಲ ಎಂದುಕೊಂಡೆ.
ಹೀಗೆ ಹತ್ತು ಹಲವು ಯೋಚನೆ, ಯೋಜನೆ, ಕಲ್ಪನೆಯಲ್ಲಿ ಮುಳುಗಿಯೇ ಬೆಳಗಿನ ಜಾವದವರೆಗೆ ಬುರುಕಿಯಲ್ಲಿಯೇ ಕಣ್ಣು ತೆರೆದು ಯೋಚಿಸಿದೆ. ಯಾವಾಗಲೋ ನಿದ್ರಾದೇವತೆ ಕೊನೆಗೂ ಆವರಿಸಿದ್ದಾಳೆ. ನಿದ್ರೆಯಲ್ಲಿದ್ದಾಗ ಮೈ ಕೊರೆಯುವ ಛಳಿ ನನ್ನನ್ನು ಎಬ್ಬಿಸಿತು. ಮನೆಯ ಮುಂದೆ ನನ್ನಿಂದ ಸ್ವಲ್ಪ ದೂರದಲ್ಲಿ ಕಟ್ಟಿಗೆ ಗುಡ್ಡೆಹಾಕಿ ಗೌಡ್ರು ಬೆಂಕಿ ಕಾಯಿಸುತ್ತಾ ಕುಳಿತಿದ್ದರು. ಮಲ್ಲನಗೌಡ ದಂದಕ್ಕಿ ಗುಡಿಸುತ್ತಿದ್ದ, ಅವ್ವ ಅಡಿಗೆ ಮನೆಯಲ್ಲಿ ತಲೆತುಂಬ ಸೆರಗು ಹಾಕಿಕೊಂಡು ಮುದುರಿಕೊಂಡು ಚಾ ಮಾಡುತ್ತಿದ್ದಳು. ತಕ್ಷಣ ಮೈ ಕೊಡವಿ ಎದ್ದು ಹಾಸಿಗೆ ಮಡಿಸಿ ಕಟ್ಟೆ ಮೇಲಿಟ್ಟು ಬಚ್ಚಲ ಮನೆ ಸೇರಿದೆ.
ಮುಖ ತೊಳೆದುಕೊಂಡು ಹಿತ್ತಲ ಬಾಗಿಲಲ್ಲಿ ನಿಂತು ಮುಖ ಒರಸಿಕೊಳ್ಳುತ್ತಿದ್ದ ಅವ್ವ ಚಾ ಹಿಡಿದುಕೊಂಡು ನನ್ನ ಬಳಿ ಬಂದಳು. ಚಾ ಕೈಗಿಟ್ಟು, "ಮತ್ತೆ ನೀನೆಂದೂ ನಮ್ಮನ್ನ ಬಿಟ್ಟು ಹೋಗಬೇಡು. ಮನೆಗೆ ಹಿರಿಮಗ. ನೀನೇ ಹೀಗೆ ಮನೆ ಬಿಟ್ಟು ಹೋದರೆ, ಏನು ಮಾಡಲಾದೀತು. ನಿನ್ನ ತಮ್ಮ ಮಲ್ಲನಗೌಡ ಸಣ್ಣಾತ. ಆತನಿಗೆ ವ್ಯವಹಾರ ಜ್ಞಾನ ಬೇರೆ ಇಲ್ಲ. ನೀನು ಇಲ್ಲೇ ಇರು" ಎಂದರು. ನನಗೆ ಆಶ್ಚಯ೯, ಆನಂದ ಎರಡೂ ಸೇರಿ ತಬ್ಬಿಬ್ಬಾದೆ. "ಅಪ್ಪ ಏನಾದರೂ ಒಂದು ಮಾತು ಆಡಿದರೆ, ಅದಕ್ಕೆ ಮರು ಮಾತನಾಡಬೇಡ", ಎಂದು ಬುದ್ದಿಹೇಳಿ ಗೌಡ್ರ ಕಡೆಗೆ ಚಾ ತಟ್ಟೆ ಹಿಡಿದು ಸಾಗಿದರು.
ಮೊದಲೇ ರಾತ್ರಿಯಿಡೀ ಗೊಂದಲದ ಗೂಡಾಗಿದ್ದ ಮನಸ್ಸು, ಒಂದೆಡೆ ಹಷ೯ ಇನ್ನೊಂದೆಡೆ ಎಲ್ಲರಿಗೂ ನನ್ನ ಮೇಲೆ ಪ್ರೀತಿ ಇದ್ದ ಮೇಲೆ ನಿನ್ನೆ ಯಾಕೆ ನನ್ನನ್ನು ಮಾತಾಡಿಸಲಿಲ್ಲ. ಹಾಗೆ ವತಿ೯ಸಿದ್ದೇಕೆ ಎಂಬ ಯೋಚನೆ ಮಾಡುತ್ತಲೇ ತಂಬಿಗೆ ಹಿಡಿದು ಊರಾಚೆ ಬಂದೆ. ಊರ ಬಡ್ಡೆಯ ನೂರು ಎಕರೆ ಜಮೀನು ನಮ್ಮ ಗೌಡ್ರಿಗೆ ಸೇರಿದ್ದು, ಅದೇ ಇಡೀ ಅಧ೯ ಊರಿನ ಪಾಯಿಖಾನೆ. ನಾನು ತಂಬಿಗೆ ಹಿಡಿದು ಅತ್ತ ಸಾಗುತ್ತಲೇ ಅನೇಕರು, "ಓ ಚಿಕ್ಕಗೌಡ್ರು ಯಾವಾಗ್ಲೋ ಬಂದಾರೆ, ಆರಾಮ?" ಎಂಬ ಲೋಕಾರೂಢಿ ಪ್ರಶ್ನೆಗಳನ್ನು ಎತ್ತಿದರು. ಅವರ ಪ್ರಶ್ನೆಗಳಿಗೆ ಉತ್ತರಿಸುತ್ತಾ ನಾನು ಕೊಂಚ ದೂರ ಸಾಗಿ ನಿತ್ಯಕಮ೯ ಮುಗಿಸಿದೆ. ಸೂಯ೯ ನಿಧಾನಕ್ಕೆ ಮೇಲೇರುತ್ತಿದ್ದ. ಬಿಸಿಲು ಬಿದ್ದ ಮೈ ಭಾಗ ಬೆಚ್ಚಗೆ, ಉಳಿದ ಭಾಗ ತಣ್ಣನೆಯ ಅನುಭವ ನೀಡುವ ವಾತಾವರಣದಲ್ಲಿ ಒಂದು ಗಂಟೆಗೂ ಹೆಚ್ಚುಕಾಲ ಯೋಚಿಸಿದೆ.
ಮನೆಗೆ ವಾಪಾಸ್ಸಾಗಿ ಕೈ ತೊಳೆದುಕೊಂಡು ಕಟ್ಟಯೇರಿ ಕುಳಿತೆ. ಗೌಡ್ರು ಕಾಣಲಿಲ್ಲ. ಒಳಹೋಗಿ ಕೇಳೋಣ ಎಂದುಕೊಂಡೆ. ಬೇಡ ಗೌಡ್ರು ಬಂದು ಕಟ್ಟೆಗೆ ಕುಳಿತ ಮೇಲೆ ಅವರೊಂದಿಗೆ ಮಾತನಾಡಲು ತಯಾರಾದೆ. ಅವ್ವ ನಾನಿಲ್ಲಿರಲು ಒಪ್ಪಿದ್ದಾಳೆ ಎಂಬ ವಿಚಾರ ಎತ್ತಿಕೊಂಡು ಮುಂದೆ ಮಾತನಾಡೋಣ ಎಂದು ಯೋಚಿಸಿದೆ. ಅಷ್ಟರಲ್ಲೇ ಗೌಡ್ರು ಬಂದು ಮುಂದೆ ಕೂತರು. ಅವರ ಮುಖ ನೋಡಿ ನಕ್ಕೆ. ಗೌಡ್ರು ನಗಲಿಲ್ಲ. ಬದಲಿಗೆ ಅಂಗಳದತ್ತ ಮುಖಮಾಡಿ ಕುಳಿತು, "ಬಾರೋ, ರಾತ್ರಿ ಬಂದಿದ್ದೆಯಾ?" ಎಂದು ಪ್ರಶ್ನೆಮಾಡಿದರು. ನಾನು ಗೌಡರು ದೖಷ್ಟಿ ನೆಟ್ಟ ಕಡೆಗೆ ನೋಡಿದೆ.
ಅತ್ತಿಂದ ಹನುಮಂತಪ್ಪ "ರಾತ್ರಿ ಬಂದಿದ್ದ ಅಪ್ಪೋರೆ, ನೀವು ಮಲಗಿದ್ರಿ. ಸಧ್ಯ ನೀವೀಗಿ ಹಾಸಿಗೆಯಿಂದ ಎದ್ದ ಕುಳಿತಿದ್ದೀರಿ. ಚಿಕ್ಕಗೌಡ್ರು ಬಂದಿದ್ದು ಖುಷಿಯಾಗಿದೆ ಅನ್ನಿಸುತ್ತೆ'' ಎಂದ. ಇದ್ದಕ್ಕಿದ್ದಂತೆ ಗೌಡ್ರು ಉಗ್ರರಾದರು. "ಏನೋ ನೀನು ಮಾತಾಡೋದು. ನಮ್ಮದು ಗೌಡ್ರ ವಂಶನೋ, ನಾವ್ಯಾರ್ದೋ ಕೊರಗಲ್ಲಿ, ಚಿಂತೇಲಿ ಬದುಕೋರಲ್ಲ. ನಾನೇನು ಅವನಿಗೆ ಬಾ ಎಂದು ಹೇಳಿಲ್ಲ. ಅವನಾಗಿಯೇ ಬಂದ. ನಾನು ಅವನ್ನು ಮಾತು ಸಹ ಆಡಿಸಿಲ್ಲ. ನಿನ್ನೆ ಈರಣ್ಣ ಡಾಕ್ಟ್ರು ಕೊಟ್ಟ ಔಷಧಿ ಕೆಲ್ಸ ಮಾಡಿದೆ ಎದ್ದಿದ್ದೀನಿ. ಅವನ ಬಂದಿದ್ದಾಯಿತಲ್ಲ ಯಾಕೋ ಬಂದಿದ್ದ ಅಂತ ಕೇಳು, ಯಾವಾಗ ಹೋಗ್ತಾನ ಅಂತ ಕೇಳು. ನನಗಿರೋನು ಒಬ್ಬನೇ ಮಗ ಅದು ಮಲ್ಲನಗೌಡ. ಭೂಮಿ ತಾಯಿ ಸೇವೆ ಮಾಡೋಕೆ ಹೆದರಿ ಹೋದನು ಗೌಡನಾಗಲ್ಲ", ಎಂದು ಭರಾಟೆಗೈದರು.
ನಾನು ತಬ್ಬಿಬ್ಬಾದೆ. ನನ್ನೆಡೆ ಮುಖಮಾಡಿದ ಗೌಡ್ರ ಕಣ್ಣುಗಳಲ್ಲಿ ಕೆಂಡ ತುಂಬಿಕೊಂಡಿತ್ತು. ಅವರು ಮಾತನಾಡಿದ ಮಾತುಗಳಲ್ಲಿ ಆಕ್ರೋಶ ತುಂಬಿತ್ತು. ಅವು ನಾಟಕೀಯವಾಗಲೂ ಸಾಧ್ಯವೇ ಇಲ್ಲ ಎಂಬುದನ್ನು ಸಾರಿ ಸಾರಿ ಹೇಳುತ್ತಿತ್ತು. ಮತ್ತೆ ಭುಸುಗುಟ್ಟಿದ ಗೌಡ್ರು, "ಲೇ ಮನಗೆ ಬಂದ ನೆಂಟರಿಗೆ ಉಪಚಾರ ಮಾಡಿ ಮುಂದೆ ಬರೋ ಬಸ್ಸಿಗೆ ಕಳುಹಿಸಿಕೊಡು" ಎಂದರು, "ನಡೀಲಾ ಹನುಮಂತ ಗುಡಿದೀರನ ಅಂಗಿಡಿಗೆ ಹೋಗೋಣ" ಎಂದು ಎದ್ದು ನಿಂತ ಗೌಡರ ಮುಖದಲ್ಲಿ ಒಂದಿಷ್ಟು ಕರುಣೆ, ಪ್ರೀತಿ ಇರಲಿಲ್ಲ. ಮಧ್ಯ ಹನುಮಂತಪ್ಪ ಬಾಯಿ ಹಾಕಿ "ಗೌಡ್ರೆ" ಎಂದ. ಅದಕ್ಕೆ ಗೌಡ್ರು ಗುಡುಗಿದರು.
ಒಂದು ಗಳಿಗೆಯ ಹಿಂದಿದ್ದ ನನ್ನ ಖುಷಿ ಸಂಪೂಣ೯ ಮಾಯವಾಯಿತು. ಅವ್ವನೆಡೆಗೆ ನೋಡಿದೆ. ಆಕೆ, ನಿಭಾ೯ವುಕಳಾಗಿದ್ದಳು. ಪಡಸಾಲೆಯಲ್ಲಿ ಕುಳಿತು ಚಾ ಕುಡಿಯುತ್ತಿದ್ದ ಮಲ್ಲನಗೌಡನತ್ತ ನೋಡಿದೆ. ಅವನು ಏನೂ ನಡೆದಿಲ್ಲವೇನೋ ಎಂಬಂತೆ, "ಬುತ್ತಿ ಕಟ್ಟು ಆಳು ಹೊರಡಿಸಬೇಕು, ಬತೀ೯ನೆ" ಎಂದು ಹೊರ ನಡೆದ. ನನಗೆ ಬೇರೆ ದಾರಿಯಿರಲಿಲ್ಲ. ಅವ್ವ ಅವಸರದಲ್ಲಿ ಅವಲಕ್ಕೆ ಮಾಡಲು ಸಿದ್ಧತೆ ಮಾಡಿಕೊಂಡರು. ಆದರೆ, ನನಗೆ ಇನ್ನು ಅಲ್ಲಿರುವುದು ಸರಿಯೆನ್ನಿಸಲಿಲ್ಲ. ಪಡಸಾಲೆಯಲ್ಲಿ ಅನಾಥವಾಗಿ ಬಿದ್ದಿದ್ದ ನನ್ನ ಬ್ಯಾಗನ್ನು ಹೆಗಲಿಗೇರಿಸಿಕೊಂಡು ಭರ ಭರನೇ ತೇರಗಡ್ಡಿಯ ಬಳಿ ಬಂದೆ. ದಾರಿಯಲ್ಲಿ ಯಾರ್ಯಾರೋ ಮಾತನಾಡಿಸದರು. ಆದರೆ, ನನ್ನ ಮನಸ್ಸಿಗೇನೋ ತೋಚಲಿಲ್ಲ. ಬಸ್ಸಿಗಾಗಿ ಕಾದು ಕುಳಿತೆ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ